ಸಾ.ರಾ.ಮಹೇಶ್ ಗೆ 500 ಎಕರೆ ಬೇನಾಮಿ ಆಸ್ತಿ ಎಲ್ಲಿಂದ ಬಂತು: ಸಾಮಾಜಿಕ ಕಾರ್ಯಕರ್ತ ಗಂಗರಾಜು ಪ್ರಶ್ನೆ

Update: 2021-06-10 15:31 GMT

ಮೈಸೂರು, ಜೂ.10: ಸರ್ಕಾರಿ ಭೂಮಿ, ಗೋಮಾಳ, ಕೆರೆ ಕಾಲುವೆ ಒತ್ತುವರಿ ಮಾಡಿಕೊಂಡು ಉದ್ಯಾನವನ ಮುಚ್ಚಿ ಬಡಾವಣೆ ನಿರ್ಮಿಸಲು ಮೈಸೂರಿನಲ್ಲಿ ದೊಡ್ಡ ಭೂ ಹಗರಣವೇ ನಡೆದಿದೆ. ಇವುಗಳ ಪೈಕಿ ಸ. ನಂ. 115 ಕೇರ್ಗಳ್ಳಿ ಮತ್ತು ಲಿಂಗಾಂಬುಧಿ ಪಾಳ್ಯದ ಸ. ನಂ. 124/2 ಪ್ರಮುಖವಾದವು ಎಂದು ಸಾಮಾಜಿಕ ಹೋರಾಟಗಾರ, ಆರ್‍ಟಿಐ ಕಾರ್ಯಕರ್ತ ಗಂಗರಾಜು ಆರೋಪಿಸಿದ್ದಾರೆ. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಆಯುಕ್ತರು, ಎಸಿಬಿಗೆ ದೂರು ಕೊಟ್ಟೆ ಅವರು ಕ್ರಮ ಕೈಗೊಳ್ಳಲಿಲ್ಲ. ಬಳಿಕ ಜಿಲ್ಲಾಧಿಕಾರಿಗಳಿಗೆ ಮೇ 10ರಂದು ಮೊದಲ ದೂರು ಸಲ್ಲಿಸಿರುವೆ. ಅನಂತರ ಭೂ ಅಕ್ರಮಗಳ ಕುರಿತು ಐದು ದೂರು ಸಲ್ಲಿಸಿರುವುದಾಗಿ ತಿಳಿಸಿದರು.  

ಜಯಪುರ ಹೋಬಳಿ ಕೇರ್ಗಳ್ಳಿ ಗ್ರಾಮ ಸರ್ವೇ ನಂಬರ್ 115ರ ಆಕಾರ ಬಂದ್‍ನಲ್ಲಿ ಪ್ರಕಾರ 129.22 ಎಕರೆ ಭೂಮಿ ಇದೆ. ಆದರೆ ಆರ್‍ಟಿಸಿಯಲ್ಲಿ 191 ಎಕರೆ ತೋರಿಸುತ್ತದೆ. ಹೆಚ್ಚುವರಿಯಾಗಿ 61 ಎಕರೆ ಎಲ್ಲಿಂದ ಬಂತು? ಭೂಮಿನೇ ಇಲ್ಲದಿದ್ದರೂ ದಾಖಲು ಮಾಡಲಾಗಿದೆ. ಆರ್‍ಟಿ ನಗರ ಬಡಾವಣೆ ನಿರ್ಮಿಸಲು ಮುಡಾ ಅದೇ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುತ್ತದೆ. ಆಡಿಯೋದಲ್ಲಿ ಉದ್ಯಮಿ ಗಣಪತಿ ರೆಡ್ಡಿ ಅವರಿಗೆ ಬೆದರಿಕೆ ಹಾಕಿರುವ ಸಾ.ರಾ.ಮಹೇಶ್, ಸದರಿ ಭೂಮಿ ತಮ್ಮದೆಂದು ಹೇಳಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ, ಪೋಡ್ ಮಾಡಿಕೊಡುವಂತೆ ತಹಶೀಲ್ದಾರ್ ಗೆ ಅರ್ಜಿ ಕೊಡುತ್ತಾರೆ. ಜಾಗ ಬಿಡದಿದ್ದಕ್ಕೆ ರೆಡ್ಡಿ ವಿರುದ್ಧ ಜಗಳ ಮಾಡುತ್ತಾರೆ. ಆದರೆ ಗಣಪತಿ ರೆಡ್ಡಿ ಭೂ ಮಾಲಕರಿಂದ ಜಮೀನು ಖರೀದಿಸಿದ್ದಾರೆ ಎಂದು ಹೇಳಿದರು. 

ಮುಡಾದಲ್ಲಿ ದಂಧೆ: ಪರಿಹಾರ ಕೊಡುವ ಮುನ್ನ ಭೂಮಿ ವಶಕ್ಕೆ ಪಡೆಯಬೇಕು. ಆದರೆ ಭೂಮಿ ವಶಕ್ಕೆ ಪಡೆಯದೇ ಪರಿಹಾರ ನೀಡಲಾಗುತ್ತಿದೆ. ಇದು ಮುಡಾದಲ್ಲಿ ದೊಡ್ಡ ದಂಧೆಯಾಗಿದೆ. ಈಗ ಗಲಾಟೆ, ತನಿಖೆ ಶುರುವಾದಾಗ, ಭೂಮಿ ಸ್ವಾಧೀನ ಕೊಟ್ಟಿಲ್ಲ. ಪರಿಹಾರ ವಾಪಸ್ ಕೊಡುವಂತೆ ಕೇಳುತ್ತಿದ್ದಾರೆ. ಯಾರು ವಾಪಸ್ ಹಣ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಅದೇ ಆಡಿಯೋದಲ್ಲಿ ಸಾ.ರಾ.ಮಹೇಶ್ ಅವರು ಹೇಳಿರುವ ಪ್ರಕಾರ 500 ಎಕರೆ ಬಡಾವಣೆ ಮಾಡಿದ್ದೇನೆ ಎಂದಿದ್ದಾರೆ. ಕಳೆದ ಚುನಾವಣೆ ವೇಳೆ 34 ಕೋಟಿ ಆಸ್ತಿ ತೋರಿಸಿದ್ದಾರೆ. 500 ಎಕರೆ ಎಲ್ಲಿ ಮಾಡಿದ್ದಾರೆ? ವರ್ಗಾವಣೆ ಮಾಡಬೇಕಿರುವುದು ಜಿಲ್ಲಾಧಿಕಾರಿಗಳನ್ನಲ್ಲ. ಬೇನಾಮಿ ಆಸ್ತಿ ಸಂಪಾದಿಸಿರುವ ಸಾ.ರಾ.ಮಹೇಶ್ ಅವರ ಶಾಸಕ ಸ್ಥಾನ ವಜಾ ಮಾಡಬೇಕು ಎಂದು ಆಗ್ರಹಿಸಿದರು.  

ಲಿಂಗಾಂಬುಧಿ ಪಾಳ್ಯದ ಸ.ನಂ. 124/2 ಜಮೀನನ್ನು 2016ರ ಸಿಡಿಪಿಯಲ್ಲಿ ವ್ಯವಸಾಯ ಉದ್ದೇಶಕೋಸ್ಕರ ಮೀಸಲಿಡುತ್ತಾರೆ. ಜನವರಿ 2016ರಲ್ಲಿ ಸಿಡಿಪಿ ಅನುಮೋದನೆಯಾಗುತ್ತೆ. ಅನಂತರ ಮುಡಾ ಈ ಭೂಮಿಯನ್ನು ವಸತಿ ಉದ್ದೇಶಕ್ಕೆ ಮೀಸಲಿಟಿದ್ದೇವೆ ಎಂದು ಜಿಲ್ಲಾಧಿಕಾರಿಗಳಿಗೆ ವರದಿ ಕೊಡುತ್ತದೆ. ಭೂ ಪರಿವರ್ತನೆ, ಸಿಡಿಪಿ ಯಾವಾಗ ಬಂದಿದೆ? ಸುಳ್ಳು ವರದಿ ಯಾವಾಗ ಕೊಡಲಾಗಿದೆ? ಈ ಬಗ್ಗೆ ತನಿಖೆ ನಡೆಸಬೇಕು. ಸಹಾಯಕ ನಿರ್ದೇಶಕ, ನಗರ ಯೋಜನಾಧಿಕಾರಿ, ಟಿಪಿಎ, ಆಯುಕ್ತರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದರು.

ಮುಡಾದಲ್ಲಿರುವ ಕೆ.ಆರ್.ನಗರದ ತಾಲೂಕಿನ ಮಿರ್ಲೆ ಗ್ರಾಮದ ಯಜ್ಞೇಂದ್ರ ಅವರು ಸಾ.ರಾ.ಮಹೇಶ್ ಅರ್ಜಿಗಳನ್ನು ನೋಡಿಕೊಳ್ಳಲೆಂದೇ ಇದ್ದಾರೆ. ಅವರು ಎಷ್ಟು ವರ್ಷದಿಂದ ಮುಡಾದಲ್ಲಿದ್ದಾರೆ. ಅದರ ವಿರುದ್ಧ ತನಿಖೆಯಾಗಬೇಕು. ಆ ವ್ಯಕ್ತಿಯನ್ನು ಬದಲಾವಣೆ ಮಾಡಬೇಕು. ಭೂ ಪರಿವರ್ತನೆ ಜಿಲ್ಲಾಧಿಕಾರಿಗಳ ಆದೇಶ ಮಾಡಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳ ಕ್ರಮ ತೆಗೆದುಕೊಂಡು ವಜಾ ಮಾಡಬೇಕು ಎಂದರು. 

ಸಂಸದ ಪ್ರತಾಪ್ ಸಿಂಹ ಎಲ್ಲದಕ್ಕೂ ಪತ್ರ ಬರೆಯುತ್ತಾರೆ. ಈ ಭೂ ಅಕ್ರಮದ ಬಗ್ಗೆಯೂ ತನಿಖೆ ಮಾಡುವಂತೆ ಪತ್ರ ಬರೆಯಬೇಕು. ಎಚ್.ವಿಶ್ವನಾಥ್ ಈ ಅಕ್ರಮದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ರೋಹಿಣಿ ಸಿಂಧೂರಿ ವರ್ಗಾವಣೆಯಾದ ದಿನ ಪ್ರತಾಪ್ ಸಿಂಹ, ರಾಜೀವ್, ನಟೇಶ್, ರಾಮದಾಸ್ ಎಲ್ಲರೂ ಯಾವ ರೆಸಾರ್ಟ್‍ನಲ್ಲಿ ಪಾರ್ಟಿ ಮಾಡಿದ್ದಾರೆ. ನಿಮ್ಮದೆಲ್ಲಾ ಒಂದು ಗ್ಯಾಂಗು, ಆ ಗ್ಯಾಂಗ್ ಲೀಡರ್ ಸಾ.ರಾ.ಮಹೇಶ್ ಎಂದು ಆರೋಪಿಸಿದರು. 

ಸಾ.ರಾ.ಚೌಲ್ಟ್ರಿ ಸುತ್ತಮುತ್ತ ಮುಡಾ ನಿವೇಶನ ಒತ್ತುವರಿ ಮಾಡಲಾಗಿದೆ. ಸಮೀಪದಲ್ಲಿ ರಾಜ ಕಾಲುವೆ ಹೋಗಿದೆ. ಬಪರ್ ಝೋನ್ ಬಿಡಬೇಕು. ಈ ಬಗ್ಗೆ ತನಿಖೆಯಾಗಬೇಕು. ಈ ಬಗ್ಗೆ ರಾಜೀವ್ ಅವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದ ಗಂಗರಾಜು, ಮುಡಾ ಆಯುಕ್ತ ಡಿ.ಬಿ.ನಟೇಶ್ ಮತ್ತು ಅಧ್ಯಕ್ಷ ಎಚ್.ವಿ.ರಾಜೀವ್ ಅವರನ್ನು ಮುಡಾದಿಂದ ಹೊರಕಳುಹಿಸಬೇಕು. ಇಲ್ಲದಿದ್ದರೆ ಆ ಸಂಸ್ಥೆಯನ್ನು ಮಟ್ಟ ಹಾಕುತ್ತಾರೆ ಎಂದರು. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News