×
Ad

ನೀಟ್ ಪರೀಕ್ಷೆ ಮುಂದೂಡದಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2021-06-10 22:25 IST

ಬೆಂಗಳೂರು, ಜೂ.10: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಮುಂದೂಡುವ ನಿರ್ಧಾರ ಕೈಬಿಡಲು ಕೇಂದ್ರ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಹುಬ್ಬಳ್ಳಿಯ ಜಿ.ಬಿ.ಕುಲಕರ್ಣಿ ಮೆಮೋರಿಯಲ್ ಲೀಗಲ್ ಟ್ರಸ್ಟ್ ನ ಡಾ.ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆ ಮುಂದೂಡಲಾಗಿದೆ. ನೀಟ್ ಪರೀಕ್ಷೆ ರದ್ದುಪಡಿಸಿಲ್ಲ ಎಂದು ಕೇಂದ್ರ ಸರಕಾರದ ಪರ ವಕೀಲರ ವಾದವನ್ನು ಒಪ್ಪಿದ ನ್ಯಾಯಪೀಠ, ಪರೀಕ್ಷೆ ಮುಂದೂಡಿಕೆ ನಿರ್ಧಾರದಲ್ಲಿ ಯಾವುದೇ ತಪ್ಪು ಕಾಣುತ್ತಿಲ್ಲ. ಹೀಗಾಗಿ ಮಧ್ಯ ಪ್ರವೇಶಿಸುವುದಿಲ್ಲವೆಂದು ಅಭಿಪ್ರಾಯಪಟ್ಟಿದೆ.

ಕೋವಿಡ್ ಹೆಚ್ಚಳದ ಕಾರಣದಿಂದ ವೈದ್ಯಕೀಯ ಸ್ನಾತಕೋತ್ತರ ಪದವಿ ಪ್ರವೇಶದ ನೀಟ್ ಪರೀಕ್ಷೆಗಳನ್ನು ಕನಿಷ್ಠ ನಾಲ್ಕು ತಿಂಗಳವರೆಗೆ ಮುಂದೂಡಲಾಗುವುದು ಎಂದು ಪ್ರಧಾನಮಂತ್ರಿಗಳ ಕಚೇರಿ ಪ್ರಕಟಿಸಿತ್ತು.

ಅರ್ಜಿದಾರರ ಮನವಿ ಏನು: ಜನವರಿಯಲ್ಲಿ ನೀಟ್ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು, ಬಳಿಕ ಪರೀಕ್ಷೆಯನ್ನು ಎಪ್ರಿಲ್ 18ಕ್ಕೆ ಮುಂದೂಡಲಾಗಿತ್ತು. ಇದೀಗ ಆಗಸ್ಟ್ 31ರವರೆಗೂ ಪರೀಕ್ಷೆ ನಡೆಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಇದು ವೈದ್ಯಕಿಯ ಸ್ನಾತಕೋತ್ತರ ಪದವಿಯ(ಎಂಡಿ ಮತ್ತು ಎಂಎಸ್) ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದೆ. ಕೋವಿಡ್‍ನಿಂದ ವಿದ್ಯಾಥಿರ್ಗಳ ಒಂದು ಶೈಕ್ಷಣಿಕ ವರ್ಷ ವ್ಯರ್ಥ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News