ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ಶತಕ ದಾಟಿದ ಪೆಟ್ರೋಲ್ ಬೆಲೆ: ವ್ಯಾಪಕ ಆಕ್ರೋಶ
ಚಿಕ್ಕಮಗಳೂರು, ಜೂ.10: ಕಾಫಿನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಗುರುವಾರ ಗುರುವಾರ 1ಲೀ. ಪೆಟ್ರೋಲ್ 100 ರೂ. 10 ಪೈಸೆಗೆ ಏರಿಕೆಯಾಗಿದ್ದರೆ, 1 ಲೀ. ಡೀಸೆಲ್ ಬೆಲೆ 92.76 ಪೈಸೆಗೆ ಏರಿಕೆಯಾಗಿದ್ದು, ಇದು ಜಿಲ್ಲೆಯ ಇತಿಹಾಸದಲ್ಲಿ ಸಾರ್ವಕಾಲಿಕ ಗಿರಷ್ಠ ಬೆಲೆಯಾಗಿ ದಾಖಲಾಗಿದೆ, ಪೆಟ್ರೋಲ್, ಡೀಸೆಲ್ ಬೆಲೆ ಈ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಕಂಡು ವಾಹನ ಸವಾರರು ಹಾಗೂ ಸಾರ್ವಜನಿಕರು ಕಂಗಾಲಾಗಿದ್ದಾರೆ.
ಗುರುವಾರ ಜಿಲ್ಲೆಯ ಎಲ್ಲ ಪೆಟ್ರೋಲ್ ಬಂಕ್‍ಗಳಲ್ಲೂ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಬೆಲೆ ಏರಿಕೆ ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಮತ್ತೊಂದು ಕಡೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಿಯಂತ್ರಣಕ್ಕೆ ಯಾವುದೇ ಕ್ರಮವಹಿಸದಿರುವುದರ ವಿರುದ್ಧ ವಿವಿಧ ಸಂಘ ಸಂಸ್ಥೆಗಳು, ವಿರೋಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ನಗರದಲ್ಲಿ ಗುರುವಾರ ಸರಣಿ ಪ್ರತಿಭಟನೆಗಳು ನಡೆದಿವೆ.
ಕಳೆದ ಅನೇಕ ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪೈಸೆ ರೂಪದಲ್ಲಿ ಏರಿಕೆ ಯಾಗುತ್ತಿದ್ದ ಪರಿಣಾಮ ಸಾರ್ವಜನಿಕರು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಗುರುವಾರ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ದಾಖಲಾಗಿರುವುದನ್ನು ಪೆಟ್ರೋಲ್ ಬಂಕ್‍ಗಳಲ್ಲಿ ಕಂಡ ಬೈಕ್, ವಿವಿಧ ವಾಹನಗಳ ಸವಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನರು ಕಂಗೆಟ್ಟಿದ್ದು, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾದಲ್ಲಿ ಉಳಿದೆಲ್ಲ ಅಗತ್ಯ ವಸ್ತುಗಳ ಬೆಲೆ ಗಗಕ್ಕೇರಲಿವೆ ಎಂಬ ಭೀತಿಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಪೆಟ್ರೋಲ್, ಅಡಿಗೆ ಅನಿಲ ಬೆಲೆ ಪೈಸೆಗಳ ಲೆಕ್ಕದಲ್ಲಿ ಏರಿಕೆ ಕಂಡಾಗ ಸೈಕಲ್ ಏರಿ ಹಾದಿ ಬೀದಿಯಲ್ಲಿ ಕಿರುಚಾಡುತ್ತಿದ್ದ ಶಾಸಕ ಸಿ.ಟಿ.ರವಿ ಮತ್ತು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ನಾಯಕರು ಈಗ ಎಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರತಿಭಟನೆ ಮಾಡಿದ್ದವರ ಪಕ್ಷವೇ ಅಧಿಕಾರದಲ್ಲಿದೆ. ಈಗ ಬೆಲೆ ಏರಿಕೆಯಾಗುತ್ತಿದ್ದರೂ ಬಿಜೆಪಿ ಮುಖಂಡರು ತುಟಿ ಬಿಚ್ಚುತ್ತಿಲ್ಲ. ಸಾರ್ವಜನಿಕರ ಕೈಗೂ ಸಿಗುತ್ತಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‍ಗೆ 71.59 ಡಾಲರ್ ಇದ್ದು, ಪೆಟ್ರೋಲ್ ಬೆಲೆ ಇಳಿಕೆಯಾಗಬೇಕಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರಿಕೆಯಾಗುತ್ತಲೇ ಇದೆ. ಪೆಟ್ರೋಲ್ ಡೀಸೆಲ್ ಬೆಲೆಗಿಂತ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸಿರುವ ತೆರಿಗೆಯೇ ಹೆಚ್ಚಿದೆ. ಕೊರೋನ ಸಂಕಷ್ಟ ಕಾಲದಲ್ಲಿ ಜನರು ಕೆಲವಿಲ್ಲದೇ ಹಣಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ಇಳಿಕೆ ಮಾಡಬೇಕಿದ್ದ ಸರಕಾರಗಳು ಜನರನ್ನು ಸುಲಿಗೆ ಮಾಡುತ್ತಾ ಬೊಕ್ಕಸ ತುಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಟೀಕಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅವೈಜ್ಞಾನಿಕವಾಗಿ ಏರಿಕೆಯಾಗುತ್ತಿದ್ದು ಜನರು ತೀವ್ರ ಸಂಕಷ್ಟಕ್ಕೆ ಬಳಗಾಗಿದ್ದಾರೆ. ಕೋವಿಡ್ 2ನೇ ಅಲೆಯಿಂದ ಜನರು ಉಸಿರು ಚೆಲ್ಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ಇಂಧನ ಬೆಲೆ ಮತ್ತು ವಿದ್ಯುತ್ ಬೆಲೆ ಹೆಚ್ಚಿಸುವ ಗಾಯದ ಮೇಲೆ ಬರೆ ಎಳೆದಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್.ದೇವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಟ್ರೋಲ್ ಬೆಲೆ ಹೆಚ್ಚಳ ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿಯನ್ನು ಖಂಡಿಸಿ ಜೂ.11ರಂದು ಬೆಳಗ್ಗೆ 11ಕ್ಕೆ ನಗರದ ಎಲ್ಲಾ ಪೆಟ್ರೋಲ್ ಬಂಕ್‍ಗಳ ಮುಂದೆ ಜಿಲ್ಲಾ ಕಾಂಗ್ರೆಸ್ ಧರಣಿ ಹಮ್ಮಿಕೊಂಡಿದೆ.