ಬಾಲಕನ ಅಪಹರಿಸಿ 2 ಕೋಟಿ ರೂ.ಗೆ ಬೇಡಿಕೆ ಪ್ರಕರಣ: ಆರೋಪಿಗೆ ಹೈಕೋರ್ಟ್ ಜಾಮೀನು
ಬೆಂಗಳೂರು, ಜೂ.10: ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಸಹಾಯ ಕೇಳಿ ಬಂದ ಯುವಕನನ್ನು ಬಳಸಿಕೊಂಡು ಆತನ ಅಂಗಡಿ ಮಾಲಕನ ಮಗನನ್ನೇ ಅಪಹರಣ ಮಾಡಿ 2 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ನೀಡುವಂತೆ ಕೋರಿ ಶಿವಾಜಿನಗರದ ಮಹಮ್ಮದ್ ಜಾನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಮಗುವಿನ ತಂದೆಯ ಬಳಿ ಕೆಲಸ ಮಾಡುತ್ತಿದ್ದ ಯುವಕನಿಗೆ ಆರ್ಥಿಕ ಸಮಸ್ಯೆಗಳಿದ್ದು, ಆತ ಪ್ರಕರಣದ ಮೊದಲನೆ ಆರೋಪಿ ಹಾಗೂ ಅರ್ಜಿದಾರ ಮಹಮ್ಮದ್ ಜಾನ್ ಬಳಿ ನೆರವು ಕೇಳಿಕೊಂಡು ಬಂದಿದ್ದಾನೆ. ಈ ವೇಳೆ ಆರೋಪಿ ಮಹಮ್ಮದ್ ಜಾನ್, ನಿನ್ನ ಮಾಲಕನ ಮಗುವನ್ನು ಅಪಹರಣ ಮಾಡಿ ಹಣ ಮಾಡೋಣ ಎಂದು ತಿಳಿಸಿದ್ದಾನೆ. ಅದರಂತೆ ಆರೋಪಿಗಳು ಬಾಲಕನ್ನು ಅಪಹರಣ ಮಾಡಿ, ಕಾರಿನಲ್ಲಿ ಕರೆದೊಯ್ದಿದ್ದಾರೆ.
ಪ್ರಕರಣದ ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದ 2ರಿಂದ 11ನೆ ಆರೋಪಿಗಳಿಗೆ ಜಾಮೀನು ನೀಡಿರುವ ಸೆಷನ್ಸ್ ಕೋರ್ಟ್, ಮೊದಲನೆ ಆರೋಪಿಗೆ ಜಾಮೀನು ನಿರಾಕರಿಸಿತ್ತು. ಆರೋಪಿಗಳು ಹಣಕ್ಕೆ ಒತ್ತಾಯಿಸಿದ್ದರೂ ಹಣ ಸಂದಾಯ ಮಾಡಿಲ್ಲ. ಜತೆಗೆ, ಮಗು ರಕ್ಷಣೆ ಮಾಡಲಾಗಿದೆ. ಆರೋಪಿ ಕಳೆದ 9 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೀಗಾಗಿ ಇನ್ನಷ್ಟು ಕಾಲ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮಹಮ್ಮದ್ ಜಾನ್‍ಗೆ ಜಾಮೀನು ನೀಡಿದೆ.
ಆರೋಪಿ 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ನೀಡಬೇಕು. ನೇರವಾಗಿ ಅಥವಾ ಪರೋಕ್ಷವಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಬಾರದು ಎಂಬ ಷರತ್ತುಗಳನ್ನು ವಿಧಿಸಿರುವ ಪೀಠ, ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದುಗೊಳಿಸಲು ಪ್ರಾಸಿಕ್ಯೂಷನ್ ಕ್ರಮ ಜರುಗಿಸಬಹುದು ಎಂದು ಸ್ಪಷ್ಟಪಡಿಸಿದೆ.