ದಲಿತ ಯುವಕರ ಮೇಲೆ ಹಲ್ಲೆ: ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲು ಸಿಪಿಐ(ಎಂಎಲ್) ಆಗ್ರಹ

Update: 2021-06-10 17:14 GMT

ಬೆಂಗಳೂರು, ಜೂ. 10: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮಾದಿಗ ಜನಾಂಗಕ್ಕೆ ಸೇರಿದ ಇಬ್ಬರು ಯುವಕರು ಕ್ಷೌರ ಮಾಡಿಸಿಕೊಳ್ಳಲು ಹೋಗಿದ್ದ ಸಂದರ್ಭದಲ್ಲಿ ಜಾತಿಯ ಕಾರಣಕ್ಕಾಗಿ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ದೌರ್ಜನ್ಯ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸವರ್ಣಿಯರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಬೇಕು ಎಂದು ಸಿಪಿಐ(ಎಂಎಲ್) ಲಿಬರೇಷನ್ ಪಿಆರ್‍ಎಸ್ ಮಣ ಆಗ್ರಹಿಸಿದ್ದಾರೆ.

ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ 14 ರಿಂದ 16 ಕಿಡಿಗೇಡಿಗಳ ಮೇಲೆ ದೂರು ದಾಖಲಾಗಿದೆ. ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕ ನಿರಾಕರಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆಯಷ್ಟೇ ಗಲಾಟೆ ನಡೆದಿತ್ತು. ಇದಾದ ಬಳಿಕ ಜೂ.6ರಂದು ಸಣ್ಣ ಹನುಮಂತ, ಬಸವರಾಜ ಎಂಬುವವರು ಕ್ಷೌರ ಮಾಡಿಸಿಕೊಳ್ಳಲು ಹೋದ ವೇಳೆ, ಜಾತಿ ನಿಂದನೆ ಮಾಡಿದ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಆದುದರಿಂದ ಸಂಬಂಧಪಟ್ಟ ಪೋಲಿಸರು ಕೂಡಲೇ ತಪ್ಪಿತಸ್ಥರ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕು. ಗ್ರಾಮದಲ್ಲಿನ ದಲಿತ ಸಮುದಾಯವರಿಗೆ ಕ್ಷೌರಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ದೌರ್ಜನ್ಯ ನಡೆಸಿದ ಸವರ್ಣಿಯರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಸಂಘಟನೆಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಮಣಿ ಅವರು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News