ಕೊರೋನ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿ, ನಿಂದನೆ ಆರೋಪ: ಐವರ ವಿರುದ್ಧ ಮೊಕದ್ದಮೆ ದಾಖಲು

Update: 2021-06-10 18:19 GMT

ಮಡಿಕೇರಿ, ಜೂ.10: ಸೀಲ್ಡೌನ್ ಆಗಿರುವ ಮನೆಗೆ ಆರೋಗ್ಯ ವಿಚಾರಿಸಲು ತೆರಳಿದ ಗ್ರಾ.ಪಂ. ಅಧ್ಯಕ್ಷೆ, ಆಶಾ ಕಾರ್ಯಕರ್ತೆ ಹಾಗೂ ಸೀಲ್ಡೌನ್ ಆದ ಮನೆಯ ಕುಟುಂಬ ಸದಸ್ಯರ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಐವರು ಯುವಕರ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಪಟ್ಟಣ ಸಮೀಪದ ಹಾನಗಲ್ಲುಬಾಣೆ ಗ್ರಾಮದ ನಿವಾಸಿ ಚಂದ್ರ ಅವರ ಮನೆಗೆ ಆರೋಗ್ಯ ವಿಚಾರಿಸಲು ತೆರಳಿದ ಆಶಾ ಕಾರ್ಯಕರ್ತೆ ಬಿಂದು, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಿ ಅವರಿಗೆ ಯುವಕರ ಗುಂಪು ಅಡ್ಡಿಪಡಿಸಿ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದ ಮೇರೆ ಹಾನಗಲ್ಲುಬಾಣೆ ಗ್ರಾಮದ ರಘು, ರಂಜಿತ್, ಸುಭಾಷ್, ದರ್ಶನ್, ಮಧು ಅವರುಗಳ ವಿರುದ್ಧ ಮೊಕದ್ದಮೆ ದಾಖಲಾಗಿದೆ.

ಆಶಾ ಕಾರ್ಯಕರ್ತೆ ಬಿಂದು ಅವರು ಈ ಬಗ್ಗೆ ಹಾನಗಲ್ಲು ಗ್ರಾಮ ಪಂಚಾಯತ್ ಗೆ ನೀಡಿದ ದೂರಿನ ಅನ್ವಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿ.ಯು. ಅಸ್ಮಾ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಐವರು ಆರೋಪಿಗಳ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬುಧವಾರ ಆರೋಪಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News