ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ತಾಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2021-06-12 11:37 GMT

ಬೆಂಗಳೂರು, ಜೂ. 12: ಕೇಂದ್ರದ ಮೋದಿ ನೇತೃತ್ವದ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮೂಲಕ ಕೋವಿಡ್ ಸಂಕಷ್ಟದ ಸಮಯದಲ್ಲಿ ಉದ್ಯೋಗವಿಲ್ಲದೆ ಕಂಗಾಲಾಗಿರುವ ಜನರಿಂದ ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ `100-ನಾಟ್‍ಔಟ್' ಆಂದೋಲನ ಮುಂದುವರಿದಿದ್ದು, ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿಂದು ಪಕ್ಷದ ಮುಖಂಡರ ನೇತೃತ್ವದಲ್ಲಿ ಪೆಟ್ರೋಲ್ ಬಂಕ್‍ಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಶನಿವಾರ ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲಿ ಚಿತ್ರದುರ್ಗಕ್ಕೆ ತೆರಳುವ ವೇಳೆ ತುಮಕೂರು ಜಿಲ್ಲೆಯ ಶಿರಾ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪೆಟ್ರೋಲ್ ಬಂಕ್‍ವೊಂದರ ಮುಂಭಾಗದಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಚಂದ್ರಪ್ಪ, ಬ್ಲಾಕ್ ಅಧ್ಯಕ್ಷ ನಟರಾಜ್ ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು. 

'ನಿಮ್ಮ ಜೇಬು ತುಂಬಿದರೆ ಸಾಕೆ? ಬಡವರ ಸ್ಥಿತಿ ಏನಾಗಬೇಕು?': `ಸರಕಾರದ ಬೊಕ್ಕಸ ತುಂಬಿದರೆ ಸಾಕೇ..? ಬಡವರು, ಜನಸಾಮಾನ್ಯರು ಜೀವನ ನಡೆಸುವುದು ಹೇಗೆ? ಅವರ ಪರಿಸ್ಥಿತಿ ಏನಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಕೇಂದ್ರದಲ್ಲಿ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಮಾಡುತ್ತಿರುವ ಐದು ದಿನಗಳ ಪ್ರತಿಭಟನಾ ಆಂದೋಲನದ ಭಾಗವಾಗಿ ಹಿರಿಯೂರು ತಾಲೂಕು ಕೇಂದ್ರಕ್ಕೆ ಇಂದು ಆಗಮಿಸಿದ್ದೇನೆ. ನಿನ್ನೆ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಾಡಿದ್ದು, ಇಂದು ತಾಲೂಕು ಕೇಂದ್ರಗಳಲ್ಲಿ, ನಾಳೆ ಹೋಬಳಿ ಹಾಗೂ ಜಿಲ್ಲಾ ಪಂಚಾಯಿತಿ ಕೇಂದ್ರಗಳಲ್ಲಿ, ನಾಡಿದ್ದು ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ, ಉಳಿದ ಕೇಂದ್ರಗಳಲ್ಲಿ ಜೂ15ರಂದು ಪ್ರತಿಭಟನೆ ಮಾಡುತ್ತೇವೆ' ಎಂದು ಹೇಳಿದರು.

ಬಿಜೆಪಿಯವರೇ ಕಲಿಸಿದ ಪಾಠವಿದು: `ಐದು ದಿನ ಐದು ಸಾವಿರ ಪೆಟ್ರೋಲ್ ಬಂಕ್‍ಗಳ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಒಬ್ಬರ ಕಾರ್ಯಕ್ರಮ ಅಲ್ಲ. ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ. ಇದು ಜನತಾದಳ, ಬಿಜೆಪಿ ಹಾಗೂ ಎಲ್ಲ ಜನರ ಕಾರ್ಯಕ್ರಮ. ಬಿಜೆಪಿಯವರು ಈ ಹಿಂದೆ ಇದೇ ಕೆಲಸ ಮಾಡಿದ್ದರಲ್ಲ.., ಅವರು ಪ್ರತಿಭಟನೆ ಮಾಡಿದ್ದನ್ನು ನಾವು ಈಗ ಮುಂದುವರಿಸುತ್ತಿದ್ದೇವೆ. ಅವರು ಪೆಟ್ರೋಲ್ ಬೆಲೆ 52 ರೂ.ತಲುಪಿದಾಗ ದೊಡ್ಡ ಹೋರಾಟ ಮಾಡಿದ್ದರು. ಈಗ 100 ರೂ.ಆಗಿದೆ'

`ಪೆಟ್ರೋಲ್ ಮೇಲೆ 62 ರೂ.ತೆರಿಗೆ ವಿಧಿಸಲಾಗಿದೆ. ಇದೊಂದೇ ವರ್ಷ ತಿಂಗಳಿಗೆ ಸರಾಸರಿ 18 ಬಾರಿಯಂತೆ ಬೆಲೆ ಹೆಚ್ಚಿಸಲಾಗಿದೆ. ಆ ಮೂಲಕ ಇಂಧನ ತೈಲ ಬೆಲೆಯಲ್ಲಿ ಶತಕ ಬಾರಿಸಿದೆ. ಇದಕ್ಕಾಗಿ ಹಲವೆಡೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಕೆಲವೆಡೆ ತಮಟೆ, ಜಾಗಟೆ ಹೊಡೆದು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿಯವರೇ ಇದನ್ನೆಲ್ಲ ನಮಗೆ ಹೇಳಿಕೊಟ್ಟರು' ಎಂದು ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.

`ಪೆಟ್ರೋಲ್, ಡೀಸೆಲ್ ಬೆಲೆ ಇಷ್ಟು ಬಾರಿ ಹೆಚ್ಚಳ ಮಾಡಿದ್ದೀರಲ್ಲಾ.., ರೈತರ ಬೆಂಬಲ ಬೆಲೆ ಎಷ್ಟು ಬಾರಿ ಹೆಚ್ಚಿಸಿದ್ದೀರಿ? ರೈತನ ಎಲ್ಲ ಬೆಳೆಯ ಬೆಲೆಯನ್ನು ಎಷ್ಟು ಬಾರಿ ಹೆಚ್ಚಿಸಿದ್ದೀರಿ? ದಿನಗೂಲಿ, ಖಾಸಗಿ ಕಾರ್ಮಿಕರು, ನೌಕರರು, ನರೇಗಾ ಕಾರ್ಮಿಕರ ವೇತನ ಎಷ್ಟು ಬಾರೀ ಹೆಚ್ಚಿಸಿದ್ದೀರಿ? ಎಂದು ಯಡಿಯೂರಪ್ಪ ಹಾಗೂ ಮೋದಿ ಅವರನ್ನು ಕೇಳಲು ಬಯಸುತ್ತೇನೆ' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲ ಸೇರಿ ಸರಕಾರ ಕಿತ್ತೊಗೆಯಬೇಕು: `ನಿಮ್ಮ ಜೇಬು ಮಾತ್ರ ತುಂಬಬೇಕಾ? ಬಡವರು ಏನು ಮಾಡಬೇಕು? ಇದಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಬಿಜೆಪಿ, ದಳದವರು ಹಾಗೂ ಜನ ಸಾಮಾನ್ಯರು ಎಲ್ಲ ಸೇರಿ ಈ ಸರಕಾರ ಕಿತ್ತೊಗೆಯಬೇಕು. ಹೀಗಾಗಿ ದೇಶದ ಉದ್ದಗಲಕ್ಕೂ ಈ ಪ್ರತಿಭಟನೆ ಮಾಡಲಾಗುತ್ತಿದೆ. ನಮ್ಮ ಕಾರ್ಯಕ್ರಮವನ್ನು ನಮ್ಮ ನಾಯಕರು ಜೂಮ್ ಮೂಲಕ ಪರಿಶೀಲಿಸುತ್ತಿದ್ದಾರೆ. ಅವರಿಗೆ ಜವಾಬ್ದಾರಿ ನೀಡಿದ್ದೇವೆ. ಹೀಗೆ ಮುಂದಿನ ದಿನಗಳಲ್ಲೂ ಜನರ ಸಮಸ್ಯೆಗಳಿಗೆ ನಾವು ಧ್ವನಿಯಾಗುತ್ತೇವೆ. ಅದಕ್ಕೆ ಬೇಕಾದ ಕಾರ್ಯಕ್ರಮ ರೂಪಿಸುತ್ತೇವೆ' ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

ಹೆಣ ಸುಡಲು ಕ್ಯೂ..: `ಕೋವಿಡ್ ಸಂಕಷ್ಟದಿಂದ ರಾಜ್ಯದಲ್ಲಿ ಹೆಣ ಸುಡಲು ಕ್ಯೂ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಯ್ತಲ್ಲ, ಬೆಡ್ ಪಡೆಯಲು, ಆ್ಯಂಬುಲೆನ್ಸ್ ಸೇವೆಗೆ, ಔಷಧಿ, ಲಸಿಕೆಗೂ ಕ್ಯೂ ಆಯ್ತಲ್ಲ.. ಅವರ ಆಡಳಿತಕ್ಕೆ ಇದಕ್ಕಿಂತಹ ಬೇರೆ ಸಾಕ್ಷಿ ಬೇಕೇ? ಔಷಧಿ, ಹಾಸಿಗೆ, ಕೋವಿಡ್ ಲಸಿಕೆ ಎಲ್ಲದರಲ್ಲೂ ಹಣ ಮಾಡುತ್ತಿದ್ದಾರೆ. ಅವರೇ ಕಾಯಿಲೆ ತಂದವರು. ಈಗ ಏನು ಮಾಡಿದ್ದಾರೆ? ಜನ ಈ ಸರಕಾರಕ್ಕೆ ಉಗಿಯುತ್ತಿದ್ದಾರೆ. ಸರಕಾರದ ನಾಯಕತ್ವ ಬದಲಾವಣೆ ವಿಚಾರವಾಗಿ ಯಾವ ಸಿನಿಮಾ ತೋರಿಸುತ್ತಾರೋ ನಾವು ನೋಡುತ್ತೇವೆ.'
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News