ಶಿವಮೊಗ್ಗ: ಕಣ್ಣೂರು ಗ್ರಾಮದ ಮನೆಯೊಂದರಲ್ಲಿ ಸ್ಫೋಟ; ಕಟ್ಟಡಗಳಿಗೆ ಹಾನಿ

Update: 2021-06-12 14:27 GMT

ಶಿವಮೊಗ್ಗ: ಆನಂದಪುರ ಸಮೀಪದ ಗೌತಮಪುರ ಗ್ರಾ.ಪಂ. ವ್ಯಾಪ್ತಿಯ ಕಣ್ಣೂರು ಗ್ರಾಮದಲ್ಲಿ ಮನೆಯೊಂದರ ಬಚ್ಚಲು ಮನೆ ಏಕಾಏಕಿ ಸ್ಫೋಟಗೊಂಡು ಅಕ್ಕಪಕ್ಕದ ಮನೆಗಳು ಬಿರುಕು ಬಿಟ್ಟ ಘಟನೆ ಶನಿವಾರ ನಡೆದಿದೆ.

ಶನಿವಾರ ಬೆಳಗ್ಗೆ 10.30 ಸುಮಾರಿಗೆ ಸ್ಫೋಟ ಉಂಟಾಗಿ ಬಚ್ಚಲು ಮನೆ ಬಿರುಕುಬಿಟ್ಟಿದೆ. ಸ್ಪೋಟದ ಪರಿಣಾಮ ಅಕ್ಕಪಕ್ಕದ  ಮನೆಗಳ ಮೇಲ್ಚಾವಣಿ ಹಾರಿಹೋಗಿವೆ. ಜೊತೆಗೆ ಮನೆಯ ಗೋಡೆ ಬಿರುಕು ಬಿಟ್ಟಿದೆ. ಯಾವುದೇ ಜೀವ ಹಾನಿ ಉಂಟಾಗಿಲ್ಲ. ಸ್ಪೋಟದಿಂದ ಭೀತಿಗೊಂಡ ಗ್ರಾಮಸ್ಥರು ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಗ್ರಾಮದ ಕರಿಯಪ್ಪ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಕರಿಯಪ್ಪ ಅವರ ಮಗ ರವಿ ಶಿಕಾರಿ ನಡೆಸಲು ನಾಡ ಬಾಂಬ್ ತಯಾರಿಸಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

"ನಮ್ಮ ಮನೆಯಲ್ಲಿ ಯಾವುದೇ ಸ್ಪೋಟಕ ವಸ್ತುಗಳಿಲ್ಲ. ಬಾಂಬ್ ತಯಾರಿಕೆ ಬಗ್ಗೆ ನಮಗೆ ಜ್ಞಾನವಿಲ್ಲ. ಗ್ರಾಮಸ್ಥರ ಆರೋಪ ನಿರಾಧಾರವಾಗಿದೆ. ಪ್ರತಿದಿನದಂತೆ ಬಚ್ಚಲುಮನೆಯ ಹಂಡೆಯ ನೀರು ಕಾಯಿಸಲು ಬೆಂಕಿ ಹಾಕಿದಾಗ ಏನೋ ಶಬ್ದ ಉಂಟಾಗಿದೆ. ಕಾರಣ ನಮಗೂ ತಿಳಿಯುತ್ತಿಲ್ಲ" ಎಂದು ಮನೆಯ ಯಜಮಾನ ಕರಿಯಪ್ಪ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, "ಇದು ಯಾವುದೇ ಬಾಂಬ್ ಇತ್ಯಾದಿ ಸ್ಪೋಟಗೊಂಡ ಸಾಕ್ಷಿ ಸಿಗುತ್ತಿಲ್ಲ. ಈ ಬಗ್ಗೆ ಬಾಂಬ್ ವಿಚಕ್ಷಣ ದಳಕ್ಕೆ ಮಾಹಿತಿ ನೀಡಲಾಗಿದೆ. ಅವರು ಬಂದು ತನಿಖೆ ನಡೆಸಿದ ಹೊರತು ಯಾವುದೇ ನಿರ್ಧಾರ ಸಾಧ್ಯವಿಲ್ಲ" ಎಂದಿದ್ದಾರೆ.

ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News