ಖಾಸಗಿ ಶಾಲಾ ಶುಲ್ಕ ಕುರಿತು ಸರಕಾರ ಸ್ಪಷ್ಟ ನಿಲುವು ಪ್ರಕಟಿಸಲಿ: ಶಶಿಕುಮಾರ್

Update: 2021-06-12 14:35 GMT

ಬೆಂಗಳೂರು, ಜೂ.12: ಖಾಸಗಿ ಶಾಲೆಗಳ ಶಾಲಾ ಶುಲ್ಕ ಕುರಿತು ಶಿಕ್ಷಣ ಇಲಾಖೆ ದ್ವಂದ್ವ ನಿಲುವನ್ನು ತಾಳುವುದು ಬೇಡ. ಸಚಿವ ಸುರೇಶ್‍ಕುಮಾರ್ ಕೂಡಲೇ ಸ್ಪಷ್ಟವಾದ ನಿಲುವನ್ನು ಪ್ರಕಟಿಸಬೇಕೆಂದು ರಾಜ್ಯ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಚಾಲಕ ಶಶಿಕುಮಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಎರಡು ವರ್ಷದಿಂದ ಪೋಷಕರು ಶಾಲಾ ಶುಲ್ಕವನ್ನು ಕಟ್ಟುತ್ತಿಲ್ಲ. ಶುಲ್ಕ ಕಟ್ಟಲು ಅರ್ಹತೆ ಇರುವವರು ಸಹ ಸರಕಾರದ ಗೊಂದಲಕಾರಿ ಹೇಳಿಕೆಯಿಂದ ಶುಲ್ಕ ಕಟ್ಟಲು ಮುಂದಾಗುತ್ತಿಲ್ಲ. ಹೀಗಾಗಿ ಶುಲ್ಕ ವಿಚಾರದಲ್ಲಿ ಶಿಕ್ಷಣ ಇಲಾಖೆ ಗೊಂದಲಕಾರಿ ಹೇಳಿಕೆ ನೀಡುವುದನ್ನು ಬಿಟ್ಟು ಸ್ಪಷ್ಟವಾದ ನಿಲುವನ್ನು ತಾಳಬೇಕೆಂದು ಮನವಿ ಮಾಡಿದ್ದಾರೆ.

ಕಳೆದ ವರ್ಷ ಶೇ.70ರಷ್ಟು ಶುಲ್ಕ ಕಟ್ಟಬೇಕೆಂದು ಸರಕಾರ ಆದೇಶ ನೀಡಿತ್ತು. ಇದು ಸಹ ಗೊಂದಲಕಾರಿ ನಿಲುವೇ ಆಗಿದೆ. ಈ ವರ್ಷ ಶುಲ್ಕ ವಿಚಾರದಲ್ಲಿ ಸರಕಾರ ಇದುವರೆಗೂ ಯಾವುದೇ ಸ್ಪಷ್ಟವಾದ ನಿಲುವನ್ನು ಪ್ರಕಟಿಸದೇ ಇರುವುದರಿಂದ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಸಮಸ್ಯೆಗೆ ಸಿಲುಕಿವೆ ಎಂದು ಅವರು ತಿಳಿಸಿದ್ದಾರೆ.

ಬಹುತೇಕ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಶಾಲಾ ಶುಲ್ಕದಲ್ಲಿ ಏರಿಕೆ ಮಾಡಿಲ್ಲ. ಶುಲ್ಕ ಏರಿಕೆ ಮಾಡಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ, ಇರುವ ಕನಿಷ್ಠ ಶುಲ್ಕವನ್ನು ಕಟ್ಟಲು ಪೋಷಕರಿಗೆ ರಾಜ್ಯ ಸರಕಾರವೇ ಅನುಮತಿ ನೀಡುತ್ತಿಲ್ಲ. ಶಿಕ್ಷಣ ಇಲಾಖೆಯೆ ಶಾಲೆಗಳು ಶುಲ್ಕ ಕೇಳಿದರೆ ದೂರು ನೀಡಿಯೆಂದು ಪ್ರಚೋದಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಶಾಲಾ ಆಡಳಿತ ಮಂಡಳಿಗಳು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಲಾ ಶಿಕ್ಷಕರ ಸಮಸ್ಯೆಯನ್ನು ಕೇಳುವವರು ಯಾರೆಂದು ಅವರು ಪ್ರಶ್ನಿಸಿದ್ದಾರೆ.

ಕಳೆದ ಎರಡು ವರ್ಷದಿಂದ ಖಾಸಗಿ ಶಾಲಾ ಶಿಕ್ಷಕರು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಪೋಷಕರು ಶಾಲಾ ಶುಲ್ಕ ಕಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸೂಕ್ತವಾದ ಸೂಚನೆಗಳನ್ನು ಪ್ರಕಟಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಕಳೆದ ಸಾಲಿನ ಖಾಸಗಿ ಶಾಲಾ ಶುಲ್ಕ ವಿಚಾರವು ನ್ಯಾಯಾಲಯದಲ್ಲಿದೆ. ಕೋವಿಡ್ ಎರಡನೇ ಅಲೆಯಿಂದಾಗಿ ಪೋಷಕರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹಾಗೂ ಖಾಸಗಿ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಈ ಸಮಸ್ಯೆಯನ್ನು ಆಯಾ ಶಾಲೆಗಳ ಆಡಳಿತ ಮಂಡಳಿಗಳು ಹಾಗೂ ಪೋಷಕರು ಕೂತು ಬಗೆಹರಿಸಿಕೊಳ್ಳುವುದು ಸೂಕ್ತ.
-ಸುರೇಶ್‍ಕುಮಾರ್, ಶಿಕ್ಷಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News