ಅರವಿಂದ ಬೆಲ್ಲದ್ ದಿಲ್ಲಿ ಭೇಟಿ ಭಿನ್ನಮತವಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2021-06-12 17:52 GMT

ಹುಬ್ಬಳ್ಳಿ, ಜೂ.12: ಶಾಸಕ ಅರವಿಂದ ಬೆಲ್ಲದ್ ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಹೊಸದಿಲ್ಲಿಗೆ ಭೇಟಿ ನೀಡಿದ್ದಾರೆ. ಇದನ್ನು ಭಿನ್ನಮತ ಎಂದು ಹೇಗೆ ಪರಿಗಣಿಸುತ್ತೀರಾ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರವಿಂದ ಬೆಲ್ಲದ್ ಅವರ ಪತ್ನಿಯ ಸಂಬಂಧಿಕರು ಬಹಳಷ್ಟು ಜನ ದಿಲ್ಲಿಯಲ್ಲಿದ್ದಾರೆ. ಅವರನ್ನು ಭೇಟಿಯಾಗಲು ಸಹಜವಾಗಿಯೇ ಅವರು ದಿಲ್ಲಿಗೆ ಹೋಗುತ್ತಿರುತ್ತಾರೆ ಎಂದರು.

ಅರವಿಂದ ಬೆಲ್ಲದ್ ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ದಿಲ್ಲಿಗೆ ಭೇಟಿ ನೀಡಿರುವುದಾಗಿ ನನಗೆ ಸಂದೇಶ ಕಳುಹಿಸಿದ್ದಾರೆ. ಹಲವು ಶಾಸಕರು, ಮುಖಂಡರು ತಮ್ಮ ವೈಯಕ್ತಿಕ ಕೆಲಸ ಹಾಗೂ ಖಾಸಗಿ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ದಿಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಅದನ್ನೆ ಭಿನ್ನಮತ ಎಂದು ಹೇಳಲು ಸಾಧ್ಯವೇ ಎಂದು ಅವರು ತಿಳಿಸಿದರು.

ಕೋವಿಡ್ ನಿರ್ವಹಣೆ ನಮ್ಮ ಆದ್ಯತೆಯಾಗಿದೆ. ಆದುದರಿಂದ, ಯಾರೊಬ್ಬರೂ ಮಾಧ್ಯಮಗಳ ಎದುರು ಯಾವುದೆ ರೀತಿಯ ಗೊಂದಲದ ಹೇಳಿಕೆಗಳನ್ನು ನೀಡಬಾರದು ಎಂದು ಸೂಚಿಸಲಾಗಿದೆ. ‘ಬಿಜೆಪಿಯವರೇ ವಿರೋಧ ಪಕ್ಷದವರಾಗಿ ಕೆಲಸ ಮಾಡಬೇಕು’ ಎಂದು ಯಾರು ಹೇಳಿಕೆ ನೀಡಿದ್ದಾರೆ ಅನ್ನೋದರ ಬಗ್ಗೆ ನನಗೆ ಮಾಹಿತಿ ಇಲ್ಲ. ಜನರ ಹಿತಾಸಕ್ತಿ ಕಾಪಾಡುವ ಕೆಲಸ ನಾವು ಮಾಡಬೇಕಿದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಸರಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗುತ್ತಿದೆ. ಆದುದರಿಂದ, ಈ ಹಂತದಲ್ಲಿ ಮುಖ್ಯಮಂತ್ರಿಯನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಈ ವಿಚಾರದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಣೆ ನೀಡಿದ್ದಾರೆ. ರಾಜ್ಯ ಉಸ್ತುವಾರಿ ಅರುಣ ಸಿಂಗ್ ಕೂಡ ಹೇಳಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News