ಅಶ್ಲೀಲ ಸೀಡಿ ಪ್ರಕರಣ: ಶಂಕಿತ ಆರೋಪಿಗಳ ವಿಚಾರಣೆ ಚುರುಕು

Update: 2021-06-12 17:53 GMT

ಬೆಂಗಳೂರು, ಜೂ.12: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೀಡಿ ಪ್ರಕರಣ ಸಂಬಂಧ ಶಂಕಿತ ಆರೋಪಿಗಳ ವಿಚಾರಣೆಯನ್ನು ಸಿಟ್ ತನಿಖಾಧಿಕಾರಿಗಳು ಚುರುಕುಗೊಳಿಸಿದ್ದಾರೆ.

ಶನಿವಾರ ಇಲ್ಲಿನ ಆಡುಗೋಡಿ ವ್ಯಾಪ್ತಿಯಲ್ಲಿ ಸಿಟ್ ಕಚೇರಿಗೆ ಹಾಜರಾದ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ಅವರನ್ನು ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದರು.

ಪ್ರಾಥಮಿಕವಾಗಿ ವ್ಯಕ್ತಿಯ ಸಾಧಾರಣ ಮಾಹಿತಿಯನ್ನು ಕಲೆಹಾಕಿದ ತನಿಖಾಧಿಕಾರಿಗಳು, ಈ ವೇಳೆ ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡರು. ಜತೆಗೆ, ಸಂತ್ರಸ್ತೆ ಪರಿಚಯ ಕುರಿತು ಮಾಹಿತಿ ಕೇಳಲಾಗಿದೆ ಎಂದು ತಿಳಿದುಬಂದಿದೆ.

ಖಾಸಗಿ ಸುದ್ದಿವಾಹಿನಿಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದ ಇಬ್ಬರೂ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಸಿಟ್‍ಗೆ ಮಾಹಿತಿ ಸಿಕ್ಕಿತ್ತು. ಆದರೆ, ಅವರಿಬ್ಬರು ತಲೆಮರೆಸಿಕೊಂಡಿದ್ದರು. ವಿವಿಧೆಡೆ  ಆರೋಪಿಗಳಿಗಾಗಿ ಸಿಟ್ ಹುಡುಕಾಟ ನಡೆಸುತ್ತಿತ್ತು. ಇದರ ನಡುವೆಯೇ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಆರೋಪಿಗಳು, ನಿರೀಕ್ಷಣಾ ಜಾಮೀನು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. 

ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ಷರತ್ತು ವಿಧಿಸಿತ್ತು. ಅದೇ ಕಾರಣಕ್ಕೆ ಸಿಟ್ ಕಚೇರಿಗೆ ಹಾಜರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News