ಡಾ.ಸಿದ್ದಲಿಂಗಯ್ಯರಿಗೆ ಮರಣೋತ್ತರ 'ರಾಷ್ಟ್ರಕವಿ' ಬಿರುದು ನೀಡಲು ದಲಿತ ಸಂಘಟನೆಗಳ ಒಕ್ಕೂಟ ಮನವಿ

Update: 2021-06-12 17:56 GMT

ಬೆಂಗಳೂರು, ಜೂ. 12: ಖ್ಯಾತ ಕವಿ, ನಾಡೋಜ ಡಾ.ಸಿದ್ಧಲಿಂಗಯ್ಯ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಿಸಲು 2 ಎಕರೆ ಜಮೀನು ಮಂಜೂರು ಮಾಡಬೇಕು. ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ `ಡಾ.ಸಿದ್ಧಲಿಂಗಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕು' ಹಾಗೂ ಅವರಿಗೆ ಮರಣೋತ್ತರ `ರಾಷ್ಟ್ರಕವಿ' ಬಿರುದು ನೀಡಿ ಗೌರವಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದೆ.

ಸಿದ್ಧಲಿಂಗಯ್ಯ ಅವರು ದೇಶ ಕಂಡ ಮೇರುವ್ಯಕ್ತಿ ಮತ್ತು ವ್ಯಕ್ತಿತ್ವ. ದಲಿತ, ಹಿಂದುಳಿದ ಹಾಗೂ ದುಡಿಯುವ ಸಮುದಾಯಗಳ ಏಳಿಗೆಗಾಗಿ ಅವರು ಸಲ್ಲಿಸಿದ ಸೇವೆ ಅಪಾರವಾದುದು. ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಕನ್ನಡ ಕಾವ್ಯದ ದಿಕ್ಕನ್ನೇ ಬದಲಿಸಿದ ಸಿದ್ಧಲಿಂಗಯ್ಯನವರು `ದಸಂಸ' ಸ್ಥಾಪಕರಲ್ಲಿ ಪ್ರಮುಖರು. ತಮ್ಮ ಬದುಕಿನುದ್ದಕ್ಕೂ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಕನ್ನಡ ನಾಡಿನ ನಿಜದ ನಾಡೋಜ. ಇಂತಹ ಮೇರು ವ್ಯಕ್ತಿ ಡಾ.ಸಿದ್ಧಲಿಂಗಯ್ಯನವರು ಈಗ ನಮ್ಮನ್ನು ಅಗಲಿದ್ದು ಅವರ ಅಂತ್ಯ ಸಂಸ್ಕಾರವನ್ನು ಸರಕಾರ ಸಕಲ ಗೌರವಗಳೊಂದಿಗೆ ನಡೆಸಿಕೊಡುತ್ತಿರುವುದು ಸರಿಯಷ್ಟೇ.
ಆದರೆ, ಅವರು ಮುಂದಿನ ತಲೆಮಾರಿನ ಪ್ರೇರಣಾ ಶಕ್ತಿಯಾಗಿರುವುದರಿಂದ ಹಾಗೂ ಅವರ ವಿಚಾರಗಳು ಕಾಲಾಂತರದಲ್ಲಿಯೂ ಪ್ರಸ್ತುತವಾಗಿರುವುದರಿಂದ ಅವರ ಹೆಸರಿನಲ್ಲಿ ಒಂದು ಸ್ಮಾರಕವನ್ನು ಮಾಡುವ ಅಗತ್ಯವಿದೆ. ಆದುದರಿಂದ ನಾವೆಲ್ಲರೂ ಸರಕಾರ, ಸಿದ್ಧಲಿಂಗಯ್ಯ ಅವರ ಹೆಸರಿನಲ್ಲಿ ಒಂದು ಸ್ಮಾರಕ ನಿರ್ಮಿಸಲು 2 ಎಕರೆ ಜಮೀನು ಮಂಜೂರು, ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಸಿದ್ದಲಿಂಗಯ್ಯ ಅಧ್ಯಯನ ಪೀಠ ಹಾಗೂ ಅವರಿಗೆ ಮರಣೋತ್ತರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಬೇಕು ಎಂದು ಒಕ್ಕೂಟದ ಎನ್.ಮುನಿಸ್ವಾಮಿ, ಎನ್.ವೆಂಕಟೇಶ್, ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್, ಲಕ್ಷ್ಮಿ ನಾರಾಯಣ ನಾಗವಾರ, ವಿ.ನಾಗರಾಜ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News