ಆಡಳಿತ ಪಕ್ಷಕ್ಕಿಂತ ಹೆಚ್ಚಿನ ಸಹಾಯ ಮಾಡುತ್ತಿರುವ ಶಾಸಕ ಝಮೀರ್ ಅಹ್ಮದ್: ಸಿದ್ದರಾಮಯ್ಯ

Update: 2021-06-12 17:58 GMT

ಬೆಂಗಳೂರು, ಜೂ.12: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಅಂಟಿಕೊಳ್ಳುವ ಪಕ್ಷ ಅಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಎಲ್ಲ ಧರ್ಮದ, ಎಲ್ಲ ಜಾತಿಯ ಬಡವರಿಗೆ ಸಮಾನವಾಗಿ ಕಾಣಬೇಕು. ಅವರಿಗೆ ಆರ್ಥಿಕ ಸಹಾಯ ಮಾಡಬೇಕು ಎಂಬುದು ನಮ್ಮ ಉದ್ದೇಶ. ಶಾಸಕ ಝಮೀರ್ ಅಹ್ಮದ್ ಖಾನ್ ಅವರು ಪಕ್ಷ ಹೇಳಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಶನಿವಾರ ಚಾಮರಾಜಪೇಟೆ ಕ್ಷೇತ್ರದ ಜೆ.ಜೆ.ಆರ್.ನಗರ ವಾರ್ಡ್‍ನ ಸಂಗಂ ಸರ್ಕಲ್‍ನಲ್ಲಿ ಶಾಸಕ ಝಮೀರ್ ಅಹ್ಮದ್ ಖಾನ್ ಆಯೋಜಿಸಿದ್ದ 300 ಮಂದಿ ಪೌರ ಕಾರ್ಮಿಕರಿಗೆ ವೈಯಕ್ತಿಕವಾಗಿ ಸಹಾಯ ಧನ ಹಾಗೂ ರೇಷನ್ ಕಿಟ್‍ಗಳನ್ನು ವಿತರಣೆ ಮಾಡುವ ‘ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಝಮೀರ್ ಅಹ್ಮದ್ ಖಾನ್ ಯಾವುದೆ ಧರ್ಮ, ಜಾತಿಯನ್ನು ನೋಡಲ್ಲ. ಯಾರು ಕಷ್ಟದಲ್ಲಿದ್ದಾರೆ ಅವರಿಗೆ ಸಹಾಯ ಮಾಡುತ್ತಾರೆ. ಅದು ಮನುಷ್ಯನ ಧ್ಯೇಯ. ನನ್ನ ಶರೀರದಲ್ಲಿ ಹರಿಯುತ್ತಿರುವ ರಕ್ತವು ಒಂದೇ, ಝಮೀರ್ ಅಹ್ಮದ್ ದೇಹದಲ್ಲಿ ಹರಿಯುತ್ತಿರುವ ರಕ್ತವೂ ಒಂದೇ. ನಮಗೆ ರಕ್ತ ಬೇಕಾದಾಗ ಮುಸ್ಲಿಮರ ರಕ್ತ ಪಡೆಯುತ್ತೇವೆ, ಮುಸ್ಲಿಮರಿಗೆ ರಕ್ತ ಬೇಕಾದಾಗ ಹಿಂದೂಗಳ ರಕ್ತ ಕೊಡುತ್ತೇವೆ. ಆಗ ಜಾತಿ, ಧರ್ಮ ಇರಲ್ಲ. ಆನಂತರ ಜಾತಿ, ಧರ್ಮ ಹುಟ್ಟು ಹಾಕುತ್ತಾರೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಚಾಮರಾಜಪೇಟೆ ಕ್ಷೇತ್ರದ ಶಾಸಕರಾದ ನಂತರ ಝಮೀರ್ ಅಹ್ಮದ್ ಎಲ್ಲ ಜಾತಿ, ಧರ್ಮದವರಿಗೆ ಸಮಾನವಾಗಿ ಕಾಣುತ್ತಿದ್ದಾರೆ. ಅದು ಪ್ರತಿಯೊಬ್ಬ ರಾಜಕಾರಣಿಯ ಕರ್ತವ್ಯ ಆಗಬೇಕು. ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೆ, ಅವರನ್ನು ಶೋಷಣೆ ಮಾಡಲಾಗುತ್ತಿತ್ತು. ನಾನು ಮುಖ್ಯಮಂತ್ರಿಯಾದಾಗ ಪೌರ ಕಾರ್ಮಿಕರಿಗಾಗಿ ಕನಿಷ್ಠ ವೇತನ ಸಿಗಲು ಕಾಯ್ದೆ ಜಾರಿಗೆ ತರಲಾಯಿತು. ನೇರವಾಗಿ ಅವರ ಖಾತೆಗಳಿಗೆ ವೇತನ ಜಮೆ ಮಾಡುವುದು ಹಾಗೂ ಅವರನ್ನು ಖಾಯಂ ಮಾಡಲು ಕ್ರಮ ಕೈಗೊಂಡೆ ಎಂದು ಅವರು ಹೇಳಿದರು.

ಇದರ ಪರಿಣಾಮವಾಗಿ ಮಾಸಿಕ 5-6 ಸಾವಿರ ರೂ.ವೇತನ ಪಡೆಯುತ್ತಿದ್ದ ಪೌರ ಕಾರ್ಮಿಕರಿಗೆ 16-17 ಸಾವಿರ ರೂ.ಗಳ ವೇತನ ಸಿಗುವಂತಾಯಿತು. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಇವರಿಗೆ ಸರಿಯಾದ ಸೌಲಭ್ಯಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ ಪೌರ ಕಾರ್ಮಿಕರಿಗಾಗಿಯೇ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಮಾಡಿಕೊಟ್ಟೆ ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು.

ಝಮೀರ್ ಅಹ್ಮದ್ ಸಚಿವರು ಅಲ್ಲ, ಶಾಸಕರು. ಅದು ವಿರೋಧ ಪಕ್ಷದಲ್ಲಿದ್ದಾರೆ. ಆಡಳಿತ ಪಕ್ಷದವರಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬರುವುದಕ್ಕಿಂತ ಮುನ್ನ ಬಸವನಗುಡಿಗೆ ಹೋಗಿದ್ದೆ ಅಲ್ಲಿ ಆಡಳಿತ ಪಕ್ಷದ ಶಾಸಕರು ಇದ್ದಾರೆ. ಆದರೆ, ಅವರು ಏನು ಮಾಡಿಲ್ಲ. ನಮ್ಮ ಪಕ್ಷದ ಮುಖಂಡರು ಬಡವರ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಚಾಮರಾಜಪೇಟೆ ಕ್ಷೇತ್ರಕ್ಕೆ ಪದೇ ಪದೇ ಯಾಕೆ ಹೋಗುತ್ತಿದ್ದೀರಾ? ಬಾದಾಮಿ ಬಿಟ್ಟು ಚಾಮರಾಜಪೇಟೆಗೆ ಬಂದು ಚುನಾವಣೆಗೆ ನಿಲ್ಲುತ್ತೀರಾ? ಎಂದು ಮಾಧ್ಯಮಗಳು ಪ್ರಶ್ನಿಸುತ್ತಿವೆ. ಪದೇ ಪದೇ ಕರೆಯುತ್ತಿದಾರೆ ಅದಕ್ಕೆ ಬರುತ್ತಿದ್ದೇನೆ. ನನಗಾಗಿ ಕ್ಷೇತ್ರ ಬಿಟ್ಟು ಕೊಡುತ್ತೇನೆ ಅನ್ನೋದು ಝಮೀರ್ ಅವರ ಔದಾರ್ಯ. ನಾನು ಸದ್ಯಕ್ಕೆ ಬಾದಾಮಿಯಲ್ಲೆ ಚುನಾವಣೆಗೆ ನಿಂತುಕೊಳ್ಳುತ್ತೇನೆ. ಆಮೇಲೆ ಈ ಬಗ್ಗೆ ಯೋಚನೆ ಮಾಡೋಣ ಎಂದು ಸಿದ್ದರಾಮಯ್ಯ ಹೇಳಿದರು.

ಶಾಸಕ ಝಮೀರ್ ಅಹ್ಮದ್ ಖಾನ್ ಮಾತನಾಡಿ, ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜನೆ ಮಾಡುವಾಗ ಕೆಲವು ಪೌರ ಕಾರ್ಮಿಕರು ಬಂದು ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿ, ಅವರ ಕೈಯಿಂದಲೆ ನಮಗೆ ರೇಷನ್ ಕಿಟ್ ಕೊಡಿಸಿ ಎಂದು ಕೇಳಿದರು. ನಮಗೆ 5-6 ಸಾವಿರ ರೂ.ವೇತನ ಬರುತ್ತಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಮಗೆ 16 ಸಾವಿರ ರೂ.ವೇತನ ಬರುವಂತೆ ಮಾಡಿದರು ಎಂದರು. ಆ ಕಾರಣಕ್ಕಾಗಿ ಇವತ್ತು ಸಿದ್ದರಾಮಯ್ಯರನ್ನು ಕರೆದು ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅಶೋಕ್ ಪಟ್ಟಣ್, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಿ.ಕೆ.ಅಲ್ತಾಫ್ ಖಾನ್, ಅಯ್ಯೂಬ್ ಖಾನ್, ಹಝ್ರತ್ ಹಮೀದ್ ಶಾ ದರ್ಗಾ ಸಮಿತಿಯ ಅಧ್ಯಕ್ಷ ಜಿ.ಎ.ಬಾವಾ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News