ಅಂಗನವಾಡಿಯ ಖಾಲಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಜು.1ರಿಂದ ಆರಂಭ

Update: 2021-06-13 12:47 GMT

ಬೆಂಗಳೂರು, ಜೂ.13: ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆ ಭರ್ತಿ ಪ್ರಕ್ರಿಯೆಯನ್ನು ಜು.1ರಿಂದ ಆರಂಭಿಸಿ ಅಕ್ಟೋಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ(ಕೆಎಸ್‍ಎಲ್‍ಎಸ್‍ಎ) ಶಿಫಾರಸು ಮಾಡಿದೆ.

2011ರಲ್ಲಿ ಅಪೌಷ್ಟಿಕತೆ ನಿವಾರಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸಲ್ಲಿಸಿರುವ ವರದಿಯಲ್ಲಿ ಕೆಎಸ್‍ಎಲ್‍ಎಸ್‍ಎ ಈ ವಿಷಯ ತಿಳಿಸಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿಯಂತೆ, ರಾಜ್ಯದಲ್ಲಿ 1,488 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 2,811 ಸಹಾಯಕಿಯರ ಹುದ್ದೆ ಖಾಲಿ ಇವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದು ಅಪೌಷ್ಟಿಕತೆ ನಿವಾರಣೆ ಮತ್ತು ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಕಾಲಮಿತಿಯೊಳಗೆ ಖಾಲಿ ಹುದ್ದೆಗಳ ಭರ್ತಿಗೆ ವೇಳಾಪಟ್ಟಿ ಹಾಕಿಕೊಳ್ಳಬೇಕು ಎಂದು ಪ್ರಾಧಿಕಾರ ಹೇಳಿದೆ.

ನೇಮಕಾತಿಗಾಗಿ ಜು.1ರಂದು ಅರ್ಜಿ ಆಹ್ವಾನಿಸಬೇಕು. ಆ.15ಕ್ಕೆ ಅರ್ಜಿಗಳ ಪರಿಶೀಲನೆ, ಡಿಸಿಗಳ ನೇತೃತ್ವದ ಸಮಿತಿ ಆ.31ಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಬೇಕು. ಸೆ.15ಕ್ಕೆ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಅ.10ಕ್ಕೆ ಅಂತಿಮ ಪಟ್ಟಿ ಪ್ರಕಟಿಸಿ, ಅ.30ಕ್ಕೆ ನೇಮಕಾತಿ ಆದೇಶಗಳನ್ನು ನೀಡಬೇಕು ಎಂದು ಕೆಎಸ್‍ಎಲ್‍ಎಸ್‍ಎ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News