ಲಾಕ್‍ಡೌನ್ ಸಂಕಷ್ಟ: ಅತಿಥಿ ಉಪನ್ಯಾಸಕರು, ಶಿಕ್ಷಕರಿಗೆ ವಿಶೇಷ ಪ್ಯಾಕೆಜ್‍ಗೆ ಆಗ್ರಹಿಸಿ ಆನ್‍ಲೈನ್ ಪ್ರತಿಭಟನೆ

Update: 2021-06-13 14:03 GMT

ಚಿಕ್ಕಮಗಳೂರು, ಜೂ.13: ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಐಟಿಐನ ಅತಿಥಿ ಉಪನ್ಯಾಸಕರು, ಶಿಕ್ಷಕರಿಗೆ ಸರಕಾರ ವೇತನ ನೀಡಿಲ್ಲ, ಶೀಘ್ರವೇ ವೇತನ ಬಿಡುಗಡೆ ಮಾಡಬೇಕು ಮತ್ತು ಸರಕಾರ ಶಿಕ್ಷಕರ ಕಷ್ಟಗಳಿಗೆ ಸ್ಪಂದಿಬೇಕು. ಸಂಕಷ್ಟಕ್ಕೆ ಸಲುಕಿದ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿದಂತೆ ನಮಗೂ ವಿಶೇಷ ಪ್ಯಾಕೇಜ್ ನೀಡಬೇಕೆಂದು ಆಗ್ರಹಿಸಿ ಜೂ.11ರಂದು ರಾಜ್ಯಾದ್ಯಂತ ಶಿಕ್ಷಕರು ಆನ್‍ಲೈನ್ ಪ್ರತಿಭಟನೆ ನಡೆಸಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದಾರೆ.

ಐಟಿಐ ಅತಿಥಿ ಬೋಧಕರಿಗೆ ಕೊರೊನಾ ಪ್ಯಾಕೇಜ್ ಘೋಷಣೆ ಮಾಡಬೇಕು, ಅತಿಥಿ ಬೋಧಕರಿಗೆ ಸಂಬಳ ಶೀಘ್ರವೇ ಬಿಡುಗಡೆ ಮಾಡಬೇಕು, ಕೋವಿಡ್‍ನಿಂದ ಮೃತಪಟ್ಟ ಅತಿಥಿ ಬೋಧಕರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ವೈದ್ಯಕೀಯ ಭದ್ರತೆ ನೀಡಬೇಕು ಹಾಗೂ ಸೇವಾಭದ್ರತೆಯನ್ನು ಖಾತ್ರಿ ಪಡಿಸಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದಾರೆ.

ಇದು ಅತಿಥಿ ಉಪನ್ಯಾಸಕರ ಗೋಳಾದರೆ, ಇನ್ನು ಖಾಸಗಿ ಶಾಲಾ ಕಾಲೇಜುಗಳಲ್ಲಿ ವೃತ್ತಿನಡೆಸುವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಅತ್ಯಂತ ಕಡಿಮೆ ಸಂಬಳಕ್ಕೆ ಶಿಕ್ಷಕ ವೃತ್ತಿಯನ್ನು ಮಾಡುತ್ತಿದ್ದಾರೆ. ಸರಕಾರ ಸದ್ಯ 5ಸಾವಿರ ರೂ. ಸಹಾಯಧನವನ್ನು ಘೋಷಣೆ ಮಾಡಿದೆ. ಈ ಐದು ಸಾವಿರ ರೂ. ಸಹಾಯಧನದಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಇನ್ನೂ ಸರಕಾರದ ಹಣ ಶಿಕ್ಷಕರ ಖಾತೆಗಳಿಗೆ ಸಂದಾಯವಾಗಿಲ್ಲ, ರಾಜ್ಯದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಜನರು ಈ ಶಿಕ್ಷಕ ವೃತ್ತಿಯನ್ನು ಅವಲಂಬಿಸಿದ್ದಾರೆ. ಇದರಲ್ಲಿ ಬಹುತೇಕ ಶಿಕ್ಷಕ ಜೀವನ ನಿರ್ವಹಣೆ ಅಸಾಧ್ಯವಾಗಿದ್ದು, ಸರಕಾರ ಮತ್ತಷ್ಟು ನೆರವಿಗೆ ಬರಬೇಕೆಂಬುದು ಐಟಿಐ ಶಿಕ್ಷಕರ ಆಗ್ರಹವಾಗಿದೆ.

ಸರಕಾರ 5ಸಾವಿರ ರೂ. ಪರಿಹಾರ ಧನವನ್ನು ಘೋಷಣೆ ಮಾಡಿದೆ. ಈ ಪರಿಹಾರ ಇನ್ನು ಶಿಕ್ಷಕರಿಗೆ ತಲುಪಿಲ್ಲ, ಸರಕಾರ ನೀಡುವ ಈ ಪರಿಹಾರದ ಹಣ ಯಾವುದಕ್ಕೂ ಸಾಲದು. ಅನೇಕ ಶಾಲಾ ಆಡಳಿತ ಮಂಡಳಿ ವೇತನವನ್ನು ನೀಡುತ್ತಿಲ್ಲ, ಇದರಿಂದ ಶಿಕ್ಷಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸರಕಾರ ವೇತನ ಶಿಕ್ಷಕರ ನೆರವಿಗೆ ಬರಬೇಕು.
- ನಾಗರಾಜ್, ಐಟಿಐ ಅತಿಥಿ ಉಪನ್ಯಾಸಕ, ಚಿಕ್ಕಮಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News