ನಾಯಕನಿಲ್ಲದೆ ಬಡವಾದ ಅನಿವಾಸಿ ಭಾರತೀಯ ಸಮಿತಿಗೆ ತಕ್ಷಣ ಉಪಾಧ್ಯಕ್ಷರನ್ನು ನೇಮಿಸಬೇಕು: ಬಸವರಾಜ್ ಸಂಕಿನ್

Update: 2021-06-13 15:46 GMT

ಬೆಂಗಳೂರು, ಜೂ.13: ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ನಡುವೆ ಸುಸ್ಥಿರ ಸಂಬಂಧವನ್ನು ಬೆಳೆಸಲು ಸ್ಥಾಪಿಸಲ್ಪಟ್ಟ 'ಅನಿವಾಸಿ ಭಾರತೀಯ ಸಮಿತಿ, ಕರ್ನಾಟಕ' ನಾಯಕನಿಲ್ಲದೆ ಬಡವಾಗಿದೆ. ಕಳೆದ 3 ವರ್ಷಗಳ ಹಿಂದೆ ತೆರವುಗೊಂಡ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಯಾರನ್ನೂ ನೇಮಕ ಮಾಡಿಲ್ಲ. ಅನಿವಾಸಿ ಕನ್ನಡಿಗರ ಕಷ್ಟ ಸುಖ ಬಲ್ಲ ಉಪಾಧ್ಯಕ್ಷರನ್ನು ತಕ್ಷಣವೇ ನೇಮಿಸಬೇಕು ಎಂದು ಸ್ಪೇನ್ ನ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ್ ಸಂಕಿನ್ ಆಗ್ರಹಿಸಿದ್ದಾರೆ.

ಕರ್ನಾಟಕ ಮತ್ತು ಅನಿವಾಸಿ ಕನ್ನಡಿಗರ ನಡುವೆ ಪರಸ್ಪರ ಸಂಬಂಧ ಹಾಗೂ ಸಂಪರ್ಕವನ್ನು ಏರ್ಪಡಿಸಲು ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ಸಮುದಾಯದ ಆಕಾಂಕ್ಷೆಗಳು, ಅವಶ್ಯಕತೆಗಳು ಮತ್ತು ನಿರೀಕ್ಷೆಗಳೆಡೆಗೆ ಗಮನ ನೀಡಲು ಹಾಗೂ ವಿಶ್ವದೆಲ್ಲೆಡೆಯ ಅನಿವಾಸಿ ಕನ್ನಡಿಗರ ನಡುವೆ ಸುಸ್ಥಿರ ಸಂಬಂಧವನ್ನು ಬೆಳೆಸಲು ಅನಿವಾಸಿ ಭಾರತೀಯ ಸಮಿತಿ ಸ್ಥಾಪಿಸಲ್ಪಟ್ಟಿದೆ. ಆದರೆ ಕಳೆದ 3 ವರ್ಷಗಳಿಂದ ಸಮಿತಿಯ ಉಪಾಧ್ಯಕ್ಷ ಸ್ಥಾನಕ್ಕೆ ಹೊಸದಾಗಿ ಯಾರನ್ನೂ ನೇಮಕ ಮಾಡಿಲ್ಲ. ಇದು ಅನಿವಾಸಿ ಕನ್ನಡಿಗರ ಕುರಿತಾದ ದಿವ್ಯ ನಿರ್ಲಕ್ಷ್ಯವನ್ನು ತೋರಿಸುತ್ತಿದೆ. ಸಮ್ಮಿಶ್ರ ಸರಕಾರ ಹಾಗೂ ಈಗ ಅಧಿಕಾರದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರವೂ ಕೂಡ ಸಮಿತಿಯನ್ನು ಕಡೆಗಣಿಸಿದೆ. ಸಮರ್ಥ ನಾಯಕತ್ವವಿಲ್ಲದೆ ಎನ್ಆರ್ ಐ ಸಮಿತಿ ಸೊರಗಿ ಹೋಗಿದೆ. ಉಪಾಧ್ಯಕ್ಷರಿಲ್ಲದೆ ಕನ್ನಡಿಗರು ಹಾಗು ಸರಕಾರದ ನಡುವಿನ ಕೊಂಡಿ ಕಳಚಿ ಹೋಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಯ್ನಾಡಿನಿಂದ ವಿದೇಶಕ್ಕೆ ದುಡಿಯಲು ಹೋದ ಕನ್ನಡಿಗರನ್ನು ಕರ್ನಾಟಕ ಸರಕಾರ ಸಂಪೂರ್ಣ ಮರೆತಿದೆ. ಕೊರೋನ ಸಂಕಷ್ಟದ ಸಂದರ್ಭದಲ್ಲಿ ಅನಿವಾಸಿಗಳ ಗೋಳನ್ನು ಸರ್ಕಾರದಲ್ಲಿ  ಕೇಳುವವರು ಯಾರೂ ಇರಲಿಲ್ಲ. ನಮ್ಮ ನೋವಿಗೆ ಧ್ವನಿಯಾಗುವವರು ಯಾರು ಇಲ್ಲ ಅನ್ನೋದು ನೋವಿನ ಸಂಗತಿ. ಜಾತಿಗೊಂದು, ಭಾಷೆಗೊಂದು ನಿಗಮ ಮಾಡುವ ರಾಜ್ಯ ಸರ್ಕಾರ, ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ನೇಮಕ ಮಾಡಲು ಯಾಕೆ ಹಿಂಜರಿಕೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಿಂದ ವಿದೇಶಕ್ಕೆ ತೆರಳಿದ ಪ್ರತಿಯೊಬ್ಬ ಅನಿವಾಸಿ ಕನ್ನಡಿಗನ ಕ್ಷೇಮವೂ ರಾಜ್ಯ ಸರ್ಕಾರದ ಗುರುತರ ಜವಾಬ್ದಾರಿ. ನಮ್ಮ ರಾಜ್ಯ ಸರ್ಕಾರವನ್ನು ನೆರೆಯ ರಾಜ್ಯದ ಸರ್ಕಾರದೊಂದಿಗೆ ತುಲನೆ ಮಾಡಲು ನಮಗೆ ಇಚ್ಚೆಯಿಲ್ಲ. ಆದರೂ ನೆರೆಯ ರಾಜ್ಯದ ಅನಿವಾಸಿಗಳಿಗೆ ವಿದೇಶದಲ್ಲಿ ಸಿಗುವ ಮನ್ನಣೆ ಮತ್ತು ಅವರ ಅಹವಾಲಿಗೆ ಸರಕಾರದಿಂದ ಸಿಗುವ ಸ್ಪಂದನೆ ನಮ್ಮ ಅನಿವಾಸಿ ಕನ್ನಡಿಗರಿಗೆ ಏಕೆ ಸಿಗುತ್ತಿಲ್ಲ? ಅನಿವಾಸಿ ಕನ್ನಡಿಗರ ಬಗ್ಗೆ ಏಕೆ ಮಲತಾಯಿ ಧೋರಣೆ? ಲಕ್ಷಾಂತರ ಅನಿವಾಸಿಗಳ ಕನ್ನಡಿಗರ ಬೇಡಿಕೆಯನ್ನು ಆಲಿಸಲು ಸರಕಾರಕ್ಕೆ ಸಮಯ ಇಲ್ಲವೇ ? ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿವಾಸಿ ಕನ್ನಡಿಗರಿಂದ ಜನವರಿ ತಿಂಗಳಲ್ಲಿ ಅಭಿಯಾನ ನಡೆಸಲಾಗಿತ್ತು. ಮುಖ್ಯಮಂತ್ರಿಗಳು ಸ್ಪಂದಿಸಿ ನೇಮಕ ಮಾಡುತ್ತೇವೆ ಎಂದು ಆಶ್ವಾಸನೆ ಕೂಡ ಕೊಟ್ಟಿದ್ದರು. ಮಾತು ಕೊಟ್ಟು 6 ತಿಂಗಳಾದರೂ ಇನ್ನೂ ಉಪಾಧ್ಯಕ್ಷರ ನೇಮಕವಾಗಿಲ್ಲ. ಇದು ಸರಕಾರದ ದಿವ್ಯ ನಿರ್ಲಕ್ಷವನ್ನು ಎತ್ತಿ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.

ರಾಜ್ಯದ ಆರ್ಥಿಕತೆಯಲ್ಲಿ ಅನಿವಾಸಿ ಕನ್ನಡಿಗರ ಪಾಲು ಎಷ್ಟು ಮಹತ್ವವೋ, ಅವರ ಕ್ಷೇಮಾಭಿವೃದ್ದಿಯೂ ಕೂಡ ಅಷ್ಟೇ ಮಹತ್ವವಾದದ್ದು. ಅನಿವಾಸಿ ಭಾರತೀಯ ಸಮಿತಿಗೆ ಸಮರ್ಥ ನೇತೃತ್ವದ ಅವಶ್ಯಕತೆ ಬಹಳ ಇದೆ. ಇನ್ನಾದರೂ ಸರ್ಕಾರ ಅನಿವಾಸಿ ಕನ್ನಡಿಗರ ಈ ಕೂಗನ್ನು ಆಲಿಸಬೇಕು. ಅನಿವಾಸಿ  ಭಾರತೀಯ ಸಮಿತಿಗೆ ಅನಿವಾಸಿ ಕನ್ನಡಿಗರ ಕಷ್ಟಸುಖ ಬಲ್ಲ ಉಪಾಧ್ಯಕ್ಷ ರನ್ನ ತಕ್ಷಣವೇ ನೇಮಿಸಿ, ಸರ್ಕಾರ ಮತ್ತು ಅನಿವಾಸಿ ಕನ್ನಡಿಗರ ನಡುವಿನ ಸಂಬಂಧ, ಸಂವಹನವನ್ನು ಹೆಚ್ಚು ಮಾಡಬೇಕು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಎನ್.ಆರ್.ಕೆ ಕಾರ್ಡ್ ಯೋಜನೆಯನ್ನು ತ್ವರಿತವಾಗಿ ಜಾರಿಗೆಗೊಳಿಸಬೇಕು. ಹೆಚ್ಚು ಕನ್ನಡಿಗರು ಇರುವ ದೇಶಗಳಲ್ಲಿ ಕನ್ನಡ ಭವನ & ಕನ್ನಡ ಪಾಠಶಾಲೆಯನ್ನು ನಿರ್ಮಿಸಬೇಕು ಎಂದು ಅವರು ಬಸವರಾಜ್ ಸಂಕಿನ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News