ನಿರಾಶ್ರಿತರ ಕೇಂದ್ರದಲ್ಲಿ ಆರತಕ್ಷತೆ: ಅನಾಥರು, ನಿರ್ಗತಿಕರಿಗೆ ಬಗೆ ಬಗೆಯ ಊಟ, ತಿಂಡಿ ಬಡಿಸಿದ ನವ ದಂಪತಿ

Update: 2021-06-13 15:52 GMT

ಚಿಕ್ಕಮಗಳೂರು, ಜೂ.13: ಕೋವಿಡ್ ನಿಯಂತ್ರಿಸಲು ರಾಜ್ಯ ಸರಕಾರ ವಾಹನ ಸಂಚಾರ, ಜನಸಂಚಾರ ಸೇರಿದಂತೆ ವ್ಯಾಪಾರ ವಹಿವಾಟಿಗೆ ನಿರ್ಬಂಧಗಳನ್ನು ವಿಧಿಸಿದ ಪರಿಣಾಮ ನಗರದಲ್ಲಿದ್ದ ನೂರಾರು ಅನಾಥರು, ಭಿಕ್ಷುಕರು ಅನ್ನಾಹಾರವಿಲ್ಲದೇ ಅಕ್ಷರಶಃ ಬೀದಿಪಾಲಾಗಿದ್ದರು. ಇಂತಹ ನಿರ್ಗರಿಕರಿಗಾಗಿ ಮಲೆನಾಡು ಕ್ರೈಸ್ತ್ರ ಅಭಿವೃದ್ಧಿ ಸಂಘದ ಸಹೃದಯರ ತಂಡ ನಗರದಲ್ಲಿ ನಿರಾಶ್ರಿತರ ಕೇಂದ್ರವನ್ನು ತೆರೆದು ಎಲ್ಲ ಸೌಕರ್ಯಗಳೊಂದಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿದ್ದರು. ಲಾಕ್‍ಡೌನ್ ಅವಧಿಯಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಿರುವ ಈ ಕೇಂದ್ರ ಇದೀಗ ನವ ದಂಪತಿಯ ಆರತಕ್ಷತೆಗೂ ಸಾಕ್ಷಿಯಾಗುತ್ತಿದೆ.

ನಗರದ ಕ್ರಿಶ್ಚಿಯನ್ ಸಮುದಾಯದ ಜೆನೆಟ್ ಮತ್ತು ಸತ್ಯಕಾಂತ್‍ರವರು ಶನಿವಾರ ಬೆಥಲ್ ಚರ್ಚ್‍ನಲ್ಲಿ ಸರಕಾರಿ ಮಾರ್ಗಸೂಚಿಯಂತೆ ಸರಳ ವಿವಾಹವಾಗಿ ನೇರವಾಗಿ ನಗರದ ಕಲ್ಯಾಣನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಜಿಲ್ಲಾಡಳಿತದ ನರವಿನೊಂದಿಗೆ ಮಲೆನಾಡು ಕ್ರೈಸ್ತ್ರ ಅಭಿವೃದ್ಧಿ ಸಂಘ ಆರಂಭಿಸಿರುವ ನಿರಾಶ್ರಿತರ ಕೇಂದ್ರಕ್ಕೆ ತೆರಳಿ ನಿರಾಶ್ರಿತರ ಸಮ್ಮುಖದಲ್ಲಿ ಆರತಕ್ಷತೆಯನ್ನು ಆಚರಿಸಿಕೊಂಡರು.

ಚಿಕ್ಕಮಗಳೂರು ನಗರದ ಕಲ್ಯಾಣನಗರದ ಜೆನೆಟ್ ಖಾಸಗಿ ಶಾಲೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ವಿವಾಹ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯ ಉದ್ಯೋಗಿಯಾಗಿರುವ ತುಮಕೂರು ಜಿಲ್ಲೆಯ ದೇವನೂರು ಮೂಲದ ಸತ್ಯಕಾಂತ್ ಜೊತೆ ಕಳೆದ ವರ್ಷ ನಿಶ್ಚಯಗೊಂಡಿತ್ತು. ಮದುವೆ ನಿಶ್ಚಯಗೊಂಡ ನಂತರ ಕೋವಿಡ್‍ನ ಮೊದಲ ಅಲೆ ಅಪ್ಪಳಿಸಿದ್ದು, ಸರಕಾರ ದೇಶಾದ್ಯಂತ ಸಂಪೂರ್ಣ ಲಾಕ್‍ಡೌನ್ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ವಿವಾಹ ಮಹೋತ್ಸವನ್ನು ಮುಂದೂಡಲಾಗಿತ್ತು. ಬಳಿಕ 2021ರ ಜೂ.12ರಂದು ಅವರ ವಿವಾಹ ಮಹೋತ್ಸವವನ್ನು ನೆರವೇರಿಸಲು ಕುಟುಂಬಸ್ಥರು ನಿಶ್ಚಯಿಸಿದ್ದರು. ಆದರೆ ಈ ಬಾರಿ ಕೋವಿಡ್‍ನ 2ನೇ ಅಲೆಯಿಂದಾಗಿ ಮದುವೆ ಕಾರ್ಯಕ್ರಮಗಳಿಗೆ ಸರಕಾರ ಭಾರೀ ನಿರ್ಬಂಧಗಳನ್ನು ವಿಧಿಸಿ ಕೇವಲ 10 ಜನರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿತ್ತು. 

ಅದ್ದೂರಿ ಮದುವೆಯ ಕನಸು ಕಂಡಿದ್ದ ಈ ಜೋಡಿಯ ಕುಟುಂಬಸ್ಥರು ಒಂದು ವರ್ಷ ತಡವಾಗಿದ್ದ ಮದುವೆಯನ್ನು ಇನ್ನೂ ಮುಂದೂಡುವುದು ಬೇಡ ಎಂದು ನಿರ್ಧರಿಸಿ ಈ ಹಿಂದೆ ನಿಗದಿಯಾಗಿದತೆ ಜೂ.12ರಂದು ಶನಿವಾರ ನಗರದ ಬೆಥಲ್ ಚರ್ಚ್‍ನಲ್ಲಿ 10 ಜನರ ಸಮ್ಮುಖದಲ್ಲಿ ವಿವಾಹ ಮಹೋತ್ಸವನ್ನು ನೆರವೇರಿಸಿದ್ದಾರೆ. ಮದುವೆ ಕಾರ್ಯ ಮುಗಿಯುತ್ತಿದ್ದಂತೆ ರವಿವಾರ ನಿರಾಶ್ರಿತರ ಕೇಂದ್ರಕ್ಕೆ ತೆರಳಿದ ಈ ಜೋಡಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡವರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಾಂಕೇತಿಕವಾಗಿ ಆರತಕ್ಷತೆ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಬಳಿಕ ಕೇಂದ್ರದ ನಿರಾಶ್ರಿತರಿಗೆ ಬಗೆ ಬಗೆಯ ತಿಂಡಿ ತಿನಿಸು, ಊಟ ಬಡಿಸುವ ಮೂಲಕ ಆರತಕ್ಷತೆಯನ್ನು ಆಚರಿಸಿಕೊಂಡಿದ್ದಾರೆ. ಈ ಜೋಡಿಯ ಕಾರ್ಯಕ್ಕೆ ಜನಮೆಚ್ಚುಗೆ ವ್ಯಕ್ತವಾಗಿದೆ.

ಕಳೆದ ವರ್ಷವೇ ನಮ್ಮ ವಿವಾಹ ಕಾರ್ಯಕ್ರಮ ನಿಗದಿಯಾಗಿತ್ತು. ಕೋವಿಡ್ ಮೊದಲ ಅಲೆ ಹಿನ್ನೆಲೆಯಲ್ಲಿ 2021ರ ಜೂ.12ರಂದು ನಮ್ಮ ವಿವಾಹ ನಿಶ್ಚಯವಾಗಿತ್ತು. ಸದ್ಯ ಕೋವಿಡ್ 2ನೇ ಅಲೆ ಇದೆ. ಸಂಭ್ರಮದಿಂದ ಮದುವೆ ಕಾರ್ಯಕ್ರಮ ನಡೆಸಲು ಸರಕಾರ ನಿರ್ಬಂಧಗಳನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಚರ್ಚ್‍ನಲ್ಲಿ ಮದುವೆಯಾದೆವು. ಗುರುಹಿರಿಯರ ನಿರ್ಧಾರದಂತೆ ಆರತಕ್ಷತೆ ಕಾರ್ಯಕ್ರಮ ವನ್ನು ನಗರದ ನಿರಾಶ್ರಿತರ ಕೇಂದ್ರದಲ್ಲಿ ನೆರವೇರಿದೆ. ಇದರಿಂದ ತುಂಬಾ ಖುಷಿಯಾಗಿದೆ.

- ಸತ್ಯಕಾಂತ್, ವರ

ಮೊದಲ ಅಲೆ ಸಂದರ್ಭಲ್ಲಿ ನಗರದಲ್ಲಿ ತೆರೆಯಲಾಗಿದ್ದ ನಿರಾಶ್ರಿತರ ಕೇಂದ್ರದಲ್ಲಿ ಸ್ವಯಂ ಸೇವಕಿಯಾಗಿ ಕೆಲಸ ನಿರ್ವಹಿಸಿದ್ದೆ. ಕಳೆದ ವರ್ಷ ಇದ್ದವರೇ ಕೆಲವರು ಈ ವರ್ಷವೂ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಅವರಲ್ಲಿ ಕೆಲವರು ನನ್ನನ್ನು ಗುರುತಿಸಿದರು. ನಿರಾಶ್ರಿತರ ಕೇಂದ್ರದಲ್ಲಿ ಆರತಕ್ಷತೆ ನೆರವೇರಿಸಿಕೊಂಡಿದ್ದು ತುಂಬಾ ಸಂತೋಷ ತಂದಿದೆ.
-ಜೆನೆಟ್, ವಧು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News