ಬಾಕಿ ವೇತನ ಕೊಡಿಸಲು ಲಂಚಕ್ಕೆ ಬೇಡಿಕೆ ಆರೋಪ: ಆತ್ಮಹತ್ಯೆಗೈದ ಸಹಕಾರ ಸಂಘದ ಕಾರ್ಯದರ್ಶಿ

Update: 2021-06-13 16:37 GMT

ದಾವಣಗೆರೆ, ಜೂ.13: ಸುಳ್ಳು ಆರೋಪ ಹಾಗೂ ಬಾಕಿ ವೇತನ ಕೊಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆಂದು ನೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಶ್ಯಾಗಲೆ ಗ್ರಾಮದಲ್ಲಿ ನಡೆದಿದೆ. 

ಬಿ.ಎನ್.ಚಂದ್ರಪ್ಪ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಒಂದು ವರ್ಷದಿಂದಲೂ ಸಂಬಳ ಇಲ್ಲದೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಅವರ ಸಂಬಳ ಮಂಜೂರು ಮಾಡಲು ಸಂಘದ ಆಡಳಿತಾಧಿಕಾರಿ, ಸಹಕಾರ ಸಂಘಗಳ ಸಹಾಯಕ ಉಪ ನಿಬಂಧಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಒಂದು ಲಕ್ಷ ರೂ. ಹಣ ಕೇಳಿದ್ದರು ಎನ್ನಲಾಗಿದೆ.

ಅಷ್ಟೊಂದು ಹಣವನ್ನು ತನ್ನಿಂದ ಕೊಡಲು ಸಾಧ್ಯವಾಗದೆಂದು 22 ಸಾವಿರ ರೂ. ಕೊಟ್ಟರೂ ಶ್ಯಾಗಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಪ್ಪರನ್ನು ಅಮಾನತುಪಡಿಸಿದ್ದರು. ಅಲ್ಲದೆ, ಸುಳ್ಳು ಆರೋಪ ಮಾಡಿ ವೇತನ ಬರದಂತೆ ತಡೆದಿದ್ದರು ಎಂದು ಆರೋಪಿಸಲಾಗಿದೆ.

'ಸಂಘದಲ್ಲಿ ಕೆಲಸ ಮಾಡಿದ್ದಕ್ಕೆ ಸಿಗುವ ಸಂಬಳದ ಹೊರತು ಬೇರೆ ಯಾವುದೇ ಹಣವನ್ನೂ ತಾನು ದುರುಪಡಿಸಿಕೊಂಡಿರಲಿಲ್ಲ. ಆದರೂ ಅಮಾನತುಪಡಿಸಿ, 1 ವರ್ಷದ ಬಾಕಿ ವೇತನವನ್ನೂ ಕೊಡದೇ ಸತಾಯಿಸಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆಗೆ ದಿಕ್ಕೇ ತೋಚದಂತಾಗಿದ್ದು, ತನಗೆ ಅನ್ಯಾಯ ಮಾಡಿದ್ದಾರೆ' ಎಂದು ಆರೋಪ ಪತ್ರ ಬರೆದಿಟ್ಟು ಚಂದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News