ಕರ್ನಾಟಕ ಕೇಂದ್ರೀಯ ವಿವಿಯ ಮಾಜಿ ಕುಲಪತಿ ಪ್ರೊ.ಮಹೇಶ್ವರಯ್ಯ ನಿಧನ

Update: 2021-06-13 16:41 GMT

ಕಲಬುರಗಿ, ಜೂ.13: ರಾಜ್ಯದ ಏಕೈಕ ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಹಿಂದಿನ ಕುಲಪತಿ ಪ್ರೊ.ಎಚ್.ಎಂ. ಮಹೇಶ್ವರಯ್ಯ(70) ರವಿವಾರ ಧಾರವಾಡದಲ್ಲಿ ನಿಧನರಾದರು.

ಕರ್ನಾಟಕದ ಕೇಂದ್ರೀಯ ವಿವಿಯ ಪ್ರಥಮ ಪೂರ್ಣಾವಧಿ ಕುಲಪತಿಗಳೆಂದು ಹೆಸರು ಪಡೆದಿದ್ದ ಪ್ರೊ.ಮಹೇಶ್ವರಯ್ಯ ಅವರು 2015ರ ಎಪ್ರಿಲ್ 20ರಿಂದ 2020ರ ನವೆಂಬರ್ 13ರವರೆಗೆ ಐದು ವರ್ಷ ಆರು ತಿಂಗಳ ಕಾಲ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಸಿಯುಕೆ ಕುಲಪತಿಗಳಾಗಿ ವಿವಿಯ ಕಟ್ಟಡಗಳನ್ನು ಪೂರ್ಣಗೊಳಿಸುವ ಕುರಿತಾಗಿ ವಿಶೇಷ ನಿಗಾ ವಹಿಸಿದ್ದಲ್ಲದೇ ಅನೇಕ ಹೊಸ ಕೋರ್ಸ್‍ಗಳ ಪ್ರಾರಂಭಕ್ಕೆ ಕಾರಣೀಭೂತರಾಗಿದ್ದರು. ವಿವಿಯಲ್ಲಿದ್ದುಕೊಂಡು ವಿವಿಯ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರಳು ಶ್ರಮಿಸಿದ್ದರು ಎಂದರೆ ತಪ್ಪಾಗಲಿಕ್ಕಿಲ್ಲ. ವಿವಿಯ ಶೈಕ್ಷಣಿಕ ಚಟುವಟಿಕೆಗಳನ್ನು ಕಾಲಾನುಕಾಲ ಆರಂಭಗೊಳ್ಳುವಲ್ಲಿ ಹಾಗೂ ಸಕಾಲಕ್ಕೆ ಘಟಿಕೋತ್ಸವ ನಡೆಯುವಲ್ಲಿ ಪ್ರೊ.ಮಹೇಶ್ವರಯ್ಯ ಅವರ ಕಾರ್ಯಶೀಲತೆಗೆ ಹಿಡಿದ ಕನ್ನಡಿಯಾಗಿದೆ.

ಸಿಯುಕೆ ಕುಲಪತಿಗಳಾಗುವ ಮುಂಚೆ ಮೈಸೂರಿನಲ್ಲಿನ ಭಾರತೀಯ ಭಾಷೆ ಸಂಸ್ಥೆಯ ನಿರ್ದೇಶಕರಾಗಿದ್ದರು. ಅದಕ್ಕೂ ಮುಂಚೆ ಧಾರವಾಡದ ಕರ್ನಾಟಕ ವಿವಿಯ ಭಾಷಾ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.

ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಪ್ರೊ.ಎಚ್.ಎಂ.ಮಹೇಶ್ವರಯ್ಯ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಪ್ರೊ.ಮಹೇಶ್ವರಯ್ಯ ನಿಧನಕ್ಕೆ ಕರ್ನಾಟಕ ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಹಾಗೂ ಸಿಬ್ಬಂದಿ ವರ್ಗ ಶೋಕ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News