ಬಿಜೆಪಿಯ ಬಿಕ್ಕಟ್ಟು ಪರಿಹಾರಕ್ಕೆ ಹೈಕಮಾಂಡ್ ನಿಯೋಗ ರಾಜ್ಯಕ್ಕೆ ಆಗಮನ ಸಾಧ್ಯತೆ

Update: 2021-06-13 17:18 GMT

ಬೆಂಗಳೂರು, ಜೂ.13: ನಾಯಕತ್ವ ಬದಲಾವಣೆ, ಆಡಳಿತದಲ್ಲಿ ಹಸ್ತಕ್ಷೇಪ ಸೇರಿದಂತೆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಅಸಮಾಧಾನಿತ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ಹೈಕಮಾಂಡ್, ನಿಯೋಗವನ್ನು ರಾಜ್ಯಕ್ಕೆ ಕಳುಹಿಸಿಕೊಡುವ ಸಾಧ್ಯತೆಗಳಿವೆ.

ಈಗಾಗಲೇ ನಿಗದಿಯಾಗಿರುವಂತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಜೂ.15ರಂದು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಅವರೊಂದಿಗೆ ಪಿಯೂಷ್ ಗೋಯೆಲ್ ಸೇರಿದಂತೆ ಕೆಲ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೂ.16 ಮತ್ತು 17ರಂದು ಬೆಂಗಳೂರಿನಲ್ಲೆ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಲಿರುವ ಅರುಣ್ ಸಿಂಗ್, ಶಾಸಕರ ಅಸಮಾಧಾನ ಶಮನಕ್ಕೆ ಪ್ರಯತ್ನ ನಡೆಸಲಿದ್ದಾರೆಂದು ಹೇಳಲಾಗುತ್ತಿದೆ.

ನಾಯಕತ್ವ ಬದಲಾವಣೆ, ಆಡಳಿತದಲ್ಲಿ ಬಿಎಸ್‍ವೈ ಪುತ್ರ ವಿಜಯೇಂದ್ರ ಹಸ್ತಕ್ಷೇಪ, ಭ್ರಷ್ಟಾಚಾರ ಸೇರಿದಂತೆ ಇನ್ನಿತರ ವಿಚಾರಗಳು ಮಹತ್ವ ಪಡೆದುಕೊಂಡಿವೆ. ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ವರಿಷ್ಠರ ಭೇಟಿ, ಆರೆಸೆಸ್ಸ್ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಈ ನಡುವೆ ಬಿ.ವೈ.ವಿಜಯೇಂದ್ರರಿಂದ ಮಠಾಧೀಶರ ಭೇಟಿ ಸೇರಿದಂತೆ ರಾಜಕೀಯ ವಿಚಾರಗಳ ಬಗ್ಗೆ ವರಿಷ್ಠರು ಚರ್ಚಿಸುವ ಸಾಧ್ಯತೆಗಳಿವೆ.

`ಇನ್ನೂ ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ' ಎಂದು ವರಿಷ್ಠರೇ ಸ್ಪಷ್ಟನೆ ನೀಡಿದ್ದರೂ, ಯಡಿಯೂರಪ್ಪನವರ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೆಲ ಶಾಸಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆ ಮೂಲಕ ಆಡಳಿತಾರೂಢ ಸರಕಾರ ಹಾಗೂ ಪಕ್ಷಕ್ಕೆ ತೀವ್ರ ಮುಜುಗರ ಸೃಷ್ಟಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸುತ್ತಿರುವುದು ರಾಜಕೀಯ ಮಹತ್ವ ಪಡೆದುಕೊಂಡಿದ್ದು, ಶಾಸಕರ ಅಸಮಾಧಾನ ನಿವಾರಣೆಗೆ ಏನೇನು ಕಸರತ್ತು ನಡೆಸಲಿದ್ದಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ ಶಾಸಕ ಅರವಿಂದ ಬೆಲ್ಲದ್ ದಿಲ್ಲಿ ಭೇಟಿ ಬೆನ್ನಲ್ಲೆ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾನು ಸಹಕಾರ ನೀಡುವೆ: `ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮುಂದಿನ ವಾರ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಂಸದರು, ಸಚಿವರು ಹಾಗೂ ಶಾಸಕರೊಂದಿಗೆ ಅವರು ಸಮಾಲೋಚನೆ ನಡೆಸಲಿದ್ದಾರೆ. ಪಕ್ಷದ ಸಂಘಟನೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ನಡೆಸಲಿದ್ದು, ನಾನೂ ಅವರೊಂದಿಗೆ ಇರಲಿದ್ದು, ಅವರಿಗೆ ಅಗತ್ಯ ಸಹಕಾರ ನೀಡುತ್ತೇನೆ' ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ತಾವು ನಡೆಸುತ್ತಿರುವುದು ಸರಕಾರವನ್ನೋ ಅಥವಾ ಸಂಸಾರವನ್ನೋ ಸಚಿವ ಡಾ.ಸುಧಾಕರ್ ಅವರೇ. ಅಂದಹಾಗೆ ತಾವು ರಾತ್ರೋರಾತ್ರಿ ಮುಂಬೈಗೆ ಓಡಿದಕ್ಕೆ ಯಾವ ಉಪಮೆ ಬಳಸುವೀರಿ!? ಬಿಜೆಪಿಯೊಂದಿಗೆ ತಾವು ಲಿವ್‍ಇನ್‍ನಲ್ಲಿ ಇರುವುದಲ್ಲವೇ?! ಸಂಕಟದ ಸಮಯದಲ್ಲಿ ಜನತೆಗೆ ನಿಮ್ಮ ಕಿತ್ತಾಟ ನೋಡುವ ತಾಳ್ಮೆ ಇಲ್ಲ, ನೆಟ್ಟಗೆ ಆಡಳಿತ ನಡೆಸಿ ಇಲ್ಲವೇ ಮನೆಗೆ ಹೊರಡಿ'

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News