ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಗೆ ಶುಲ್ಕ ವಿನಾಯಿತಿಗೆ ಅವಕಾಶ: ಶಶಿಕುಮಾರ್

Update: 2021-06-13 17:39 GMT

ಬೆಂಗಳೂರು, ಜೂ.13: ಕೋವಿಡ್ ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರಿಗೆ ಶಾಲಾ ಶುಲ್ಕ ವಿನಾಯಿತಿ ನೀಡಲು ಖಾಸಗಿ ಶಿಕ್ಷಣ ಸಂಸ್ಥೆಗಳು ಸಿದ್ಧವಿವೆ. ಆದರೆ, ಶುಲ್ಕ ವಿನಾಯಿತಿಯನ್ನು ಸಾರ್ವತ್ರಿಕಗೊಳಿಸುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತೇವೆಂದು ರಾಜ್ಯ ಖಾಸಗಿ ಶಾಲಾ ಶಿಕ್ಷಣ ಮಂಡಳಿಗಳ ಸಂಚಾಲಕ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿಜವಾಗಿ ಕೆಲಸ ಕಳೆದುಕೊಂಡಿರುವ ಪೋಷಕರು ಸೂಕ್ತ ಸಾಕ್ಷ್ಯಗಳನ್ನು ಶಾಲೆಗಳಿಗೆ ಒಪ್ಪಿಸುವುದರ ಮೂಲಕ ಶುಲ್ಕ ವಿನಾಯಿತಿ ಪಡೆಯಲು ಅವಕಾಶವಿದೆ. ಆದರೆ, ಅದನ್ನು ಯಾರೂ ದುರುಪಯೋಗ ಪಡಿಸಿಕೊಳ್ಳಬಾರದೆಂದು ತಿಳಿಸಿದ್ದಾರೆ.

ಕಳೆದ ವರ್ಷದ ಶೇ.70ರಷ್ಟೆ ಶುಲ್ಕ ಕಟ್ಟಬೇಕೆಂಬ ಆದೇಶ ಈ ವರ್ಷ ಅನ್ವಯವಾಗುವುದಿಲ್ಲ. ಬಹುತೇಕ ಶಾಲೆಗಳು ಕಳೆದ ಎರಡು ವರ್ಷದಿಂದ ಶಾಲಾ ಶುಲ್ಕದಲ್ಲಿ ಏರಿಕೆ ಮಾಡಿಲ್ಲ. 2019-20ರಲ್ಲಿ ನಿಗದಿಪಡಿಸಿದ್ದ ಶುಲ್ಕವನ್ನೇ ತೆಗೆದುಕೊಳ್ಳಲಾಗುತ್ತಿದೆ. ಹಾಗೂ ಒಂದೇ ಕಂತಿಯನ್ನು ಸಂಪೂರ್ಣ ಶುಲ್ಕವನ್ನು ಕಟ್ಟಬೇಕೆಂಬ ಒತ್ತಾಯ ಹಾಕುವುದಿಲ್ಲ. ಕಂತಿನ ರೂಪದಲ್ಲಿ ಕಟ್ಟಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಂದ ಶಾಲಾ ಶುಲ್ಕ ಬರುವುದಿಲ್ಲ. ಹಾಗೂ ಶಾಲಾ ಶುಲ್ಕವನ್ನು ಏರಿಕೆ ಮಾಡದಿರುವುದರಿಂದ ಶಾಲೆಗಳ ಮೇಲೆ ಶೇ.40ರಷ್ಟು ಹೆಚ್ಚಿನ ಆರ್ಥಿಕ ಹೊರೆ ಬೀಳಿತ್ತಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಪೋಷಕರಿಗೆ ಶಾಲಾ ಶುಲ್ಕ ಪಾವತಿಸುವ ನಿಟ್ಟಿನಲ್ಲಿ ಸೂಕ್ತ ಆದೇಶಗಳನ್ನು ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News