ಹಿಂದಿ ರಾಷ್ಟ್ರಭಾಷೆಯಾಗಿ ಬಿಂಬಿಸಿದರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ: ಮುಖ್ಯಮಂತ್ರಿ ಚಂದ್ರು

Update: 2021-06-13 17:44 GMT

ಬೆಂಗಳೂರು, ಜೂ.13: ಹಿಂದಿ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ಹಾಗೂ ಉಳಿದ ಭಾಷೆಗಳನ್ನು ಅದರ ಕೆಳ ಭಾಷೆಗಳಾಗಿ ಮಾಡಲು ಹೊರಡುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಂತಾಗುತ್ತದೆ ಎಂದು ಮಾಜಿ ಶಾಸಕ ಹಾಗೂ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಘಟಕದಿಂದ ಆಯೋಜಿಸಿದ್ದ ವಿಚಾರ ಕಲರವದ 13ನೇ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ಒಂದು ದೇಶ ಹಲವು ಭಾಷೆಗಳಿಂದ ರಚಿತಗೊಂಡಿದ್ದಾಗ, ಪ್ರತಿ ಭಾಷೆಗೂ ಅದರದೇ ರಾಷ್ಟ್ರಭಾಷೆಯ ಸ್ಥಾನಮಾನಗಳು ಇರಬೇಕೆಂದು ತಿಳಿಸಿದ್ದಾರೆ.

ಭಾಷೆ ನಮ್ಮ ಸಂಸ್ಕೃತಿ, ನಮ್ಮ ಭಾವನೆ ಹಾಗೂ ನಮ್ಮ ಜೀವನ ಹಾಗೂ ಬದುಕು. ಈ ಒಕ್ಕೂಟ ವ್ಯವಸ್ಥೆಯಲ್ಲಿ ವಿವಿಧತೆಯಲ್ಲಿ ಏಕತೆ ಇರುವ ಏಕೈಕ ದೇಶ ನಮ್ಮ ಭಾರತ ದೇಶ. ನಮ್ಮ ದೇಶವು ಹಲವಾರು ಭಾಷೆಗಳು, ಧರ್ಮಗಳು ಹಾಗೂ ಸಂಸ್ಕೃತಿಗಳನ್ನೊಳಗೊಂಡ ಸುಂದರ ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲಾ ಭಾಷೆಗಳನ್ನು ಗೌರವಿಸಬೇಕು, ಆದರೆ, ಕನ್ನಡ ಭಾಷೆಯನ್ನು ಅತ್ಯಂತವಾಗಿ ಪ್ರೀತಿಸಬೇಕು. 1956ರ ನಂತರ ಏಕೀಕರಣ ಹೋರಾಟದಲ್ಲಿ ದೇಶವನ್ನು ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಲಾಯಿತು. ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ತಿಳಿಸಿರುವ ಎಲ್ಲಾ ಭಾಷೆಗಳು ರಾಷ್ಟ್ರ ಭಾಷೆಗಳೆ. ರಾಷ್ಟ್ರೀಯ ಉದ್ಯೋಗ ಹಾಗೂ ಶಿಕ್ಷಣ ನೀತಿಗಳಂತೆ ಭಾಷಾ ನೀತಿಗಳನ್ನು ತರಬೇಕೆಂದು ಅವರು ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಎನ್ನೆಸ್ಸೆಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ ಹಾಗೂ ಕಾರ್ಯಕ್ರಮ ಆಯೋಜಕ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಎನ್. ಸತೀಶ್ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News