ಲಾಕ್‍ಡೌನ್‍ನಿಂದ ಸುಮಾರು 75 ಸಾವಿರ ಕೋಟಿ ರೂ. ನಷ್ಟ: ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್

Update: 2021-06-13 17:47 GMT

ಬೆಂಗಳೂರು, ಜೂ.13: ರಾಜ್ಯದಲ್ಲಿ ಮೇ ಮತ್ತು ಜೂನ್‍ನಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು 75 ಸಾವಿರ ಕೋಟಿ ರೂ.ನಷ್ಟು ವ್ಯಾಪಾರ ವಹಿವಾಟು ನಷ್ಟವಾಗಿದೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಹೇಳಿದ್ದಾರೆ.

ಕೈಗಾರಿಕೆ ವಲಯ, ವಾಣಿಜ್ಯ ಮತ್ತು ವ್ಯಾಪಾರ ವಲಯ ಪ್ರಮುಖವಾಗಿ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿ ಬೃಹತ್ ಪ್ರಮಾಣದ ವ್ಯಾಪಾರ ನಷ್ಟ ಅನುಭವಿಸಿದೆ. ಇದು ಸುಧಾರಿಸಿಕೊಳ್ಳಲು ಕನಿಷ್ಠ ಮೂರು ತಿಂಗಳಿನಿಂದ ಆರು ತಿಂಗಳು ಬೇಕಾಗಬಹುದು ಎಂದು ಹೇಳಿದರು.

ರಾಜ್ಯದಲ್ಲಿ ತಿಂಗಳಿಗೆ ಸುಮಾರು 50 ಸಾವಿರ ಕೋಟಿ ರೂ.ವಹಿವಾಟು ನಡೆಯುತ್ತದೆ. ಮೇ ತಿಂಗಳಲ್ಲಿ ಪೂರ್ಣ ಪ್ರಮಾಣ ಹಾಗೂ ಜೂನ್‍ನಲ್ಲಿಯೂ ಅರ್ಧ ತಿಂಗಳು ವಹಿವಾಟು ಸ್ಥಗಿತವಾಗಿರುವುದರಿಂದ 75 ಸಾವಿರ ಕೋಟಿ ರೂ.ವರೆಗೆ ವಹಿವಾಟು ನಷ್ಟಗೊಂಡಿದೆ. ಇದು ವಾಣಿಜ್ಯೋದ್ಯಮ ವಲಯದ ಮೇಲೆ ಗಂಭೀರ ಪರಿಣಾಮವೇ ಬೀರಿದ್ದು, ಕಾರ್ಮಿಕರಿಗೆ ವೇತನ ಪಾವತಿ, ನಿರ್ವಹಣೆ ವೆಚ್ಚ ಸಾಲದ ಇಎಂಐ ಪಾವತಿ, ವಿದ್ಯುತ್ ಹಾಗೂ ಆಸ್ತಿ ತೆರಿಗೆ ಪಾವತಿಗೆ ಕಷ್ಟವಾಗಿದೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ.ಸುಂದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News