ನಟ ಸಂಚಾರಿ ವಿಜಯ್‌ ಆರೋಗ್ಯ ಸ್ಥಿತಿ ತೀರಾ ಗಂಭೀರ: ಅಪೊಲೊ ಆಸ್ಪತ್ರೆ ವೈದ್ಯರ ಮಾಹಿತಿ

Update: 2021-06-14 06:48 GMT

ಬೆಂಗಳೂರು, ಜೂ.14: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಅವರು ಕೋಮಾದಲ್ಲಿದ್ದು, ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ ಎಂದು ಅಪೊಲೊ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಜೆ.ಪಿ.ನಗರದಲ್ಲಿ ತಮ್ಮ ಸ್ನೇಹಿತರ ಮನೆಗೆ ಹೋಗಿ ವಾಪಸ್ಸು ಬರುತ್ತಿದ್ದ ವೇಳೆ ಬೈಕ್‍ನಿಂದ ಬಿದ್ದು ವಿಜಯ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಬಳಿಕ ದಾರಿಹೋಕರು ಅವರನ್ನು ಬನ್ನೇರುಘಟ್ಟದ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು.

ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದು, ಅದಕ್ಕಾಗಿ ರವಿವಾರ ಮುಂಜಾನೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ಐಸಿಯುನಲ್ಲಿರುವ ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ವಿಜಯ್ ಆಪ್ತರು ಮಾಹಿತಿ ನೀಡಿದ್ದಾರೆ.

ವಿಜಯ್‌ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಅರುಣ್‌ ನಾಯಕ್‌, 'ಜೂನ್‌ 12ರ ರಾತ್ರಿ 11.45ಕ್ಕೆ ವಿಜಯ್‌ ಅವರಿಗೆ ಅಪಘಾತವಾಗಿತ್ತು. ಅವರನ್ನು ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕಕ್ಕೆ ಅವರನ್ನು ಕರೆತರುವ ವೇಳೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ತಿಳಿಸಿದ್ದಾರೆ.

'ಅವರ ಮಿದುಳಿನ ಸಿಟಿ ಸ್ಕ್ಯಾನ್‌ ನಡೆಸಿದ ಸಂದರ್ಭದಲ್ಲಿ, ಮಿದುಳಿಗೆ ಭಾರಿ ಪೆಟ್ಟುಬಿದ್ದಿರುವುದು ಕಂಡುಬಂದಿತ್ತು. ಜೊತೆಗೆ ಮಿದುಳಿನೊಳಗೆ ರಕ್ತಸ್ರಾವವೂ ಆಗಿತ್ತು. ರಕ್ತಸ್ರಾವವನ್ನು ತಡೆಯಲು ತಕ್ಷಣದಲ್ಲೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪ್ರಸ್ತುತ ಅವರು ನ್ಯೂರೊ ಐಸಿಯುವಿನಲ್ಲಿ, ಕೃತಕ ಆಮ್ಲಜನಕದಲ್ಲಿ ಉಸಿರಾಡುತ್ತಿದ್ದಾರೆ. ಅವರು ಕೋಮಾದಲ್ಲಿದ್ದು, ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದ್ದು, ಅತ್ಯುತ್ತಮವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ’ ಎಂದಿದ್ದಾರೆ.

ನಟ ನೀನಾಸಂ ಸತೀಶ್ ಮಾತನಾಡಿ, ಸಂಚಾರಿ ವಿಜಯ್‌ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದೆ. ವಿಜಯ್ ಕೇವಲ ನಟನೆ ಮಾತ್ರ ಮಾಡಿಕೊಂಡಿರಲಿಲ್ಲ. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದ. ವಿಜಯ್ ಇಲ್ಲದಿದ್ದರೆ ತುಂಬಾ ಕಷ್ಟವಾಗುತ್ತದೆ ಎಂದು ಕಣ್ಣೀರಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News