'ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ': ನಟ ಸಂಚಾರಿ ವಿಜಯ್‌ ನಿಧನಕ್ಕೆ ಸಿಎಂ ಯಡಿಯೂರಪ್ಪ ಸಂತಾಪ

Update: 2021-06-14 07:58 GMT

ಬೆಂಗಳೂರು, ಜೂ.14: ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾಗಿದ್ದು, ವಿಜಯ್ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

''ಸಂಚಾರಿ ವಿಜಯ್ ಅವರು ರಂಗಭೂಮಿ, ಸಿನೆಮಾ ರಂಗಗಳೆರಡರಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ' ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಜೆ.ಪಿ.ನಗರದಲ್ಲಿ ತಮ್ಮ ಸ್ನೇಹಿತರ ಮನೆಗೆ ಹೋಗಿ ವಾಪಸ್ಸು ಬರುತ್ತಿದ್ದ ವೇಳೆ ಬೈಕ್‍ನಿಂದ ಬಿದ್ದು ವಿಜಯ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಬಳಿಕ ದಾರಿಹೋಕರು ಅವರನ್ನು ಬನ್ನೇರುಘಟ್ಟದ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದರು. ವಿಜಯ್‌ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದರಿಂದ ರವಿವಾರ ಮುಂಜಾನೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News