ಕೋವಿಡ್ ಲಾಕ್‍ಡೌನ್ ಸಡಿಲಿಕೆ: ಬಂಧನದಿಂದ ಬಿಡುಗಡೆ ಭಾವದಲ್ಲಿ ರಸ್ತೆಗಿಳಿದ ಜನ

Update: 2021-06-14 18:04 GMT

ಬೆಂಗಳೂರು, ಜೂ. 14: ಕೋವಿಡ್ ಸೋಂಕಿನ ಎರಡನೆ ಅಲೆ ತಡೆಗಟ್ಟಲು ಹೇರಿದ್ದ ಸುದೀರ್ಘ ಅವಧಿಯ ಕೋವಿಡ್ ಕರ್ಫ್ಯೂ, ಕೋವಿಡ್ ಲಾಕ್‍ಡೌನ್ ಭಾಗಶಃ ಸಡಿಲಿಕೆ ಹಿನ್ನೆಲೆಯಲ್ಲಿ `ಬಂಧನದಿಂದ ಬಿಡುಗಡೆ' ಸಿಕ್ಕ ಭಾವನೆಯಲ್ಲಿ ಜನತೆ ರಸ್ತೆಗಿಳಿದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ 20 ಜಿಲ್ಲೆಗಳಲ್ಲಿಯೂ ಜನಸಂದಣಿ ಕಂಡುಬಂತು.

ಸುಮಾರು ಎರಡು ತಿಂಗಳಿಂದ ಜನರಿಲ್ಲದೆ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಸಂಚಾರ ಆರಂಭವಾಗಿದ್ದು, ದ್ವಿಚಕ್ರ ವಾಹನಗಳು, ಕಾರು, ಆಟೋರಿಕ್ಷಾ, ಟ್ಯಾಕ್ಸಿ ಸಹಿತ ಹಲವು ವಾಹನಗಳು ರಸ್ತೆಗಿಳಿದವು. ಕೋವಿಡ್ ಲಾಕ್‍ಡೌನ್ ಸಡಿಲಿಸಿರುವ 20 ಜಿಲ್ಲೆಗಳಲ್ಲಿ ಜನರು ಕೋವಿಡ್ ಸೋಂಕು ಮರೆತು ಮುಗಿಬಿದ್ದಂತೆ ಕಾಣುತ್ತಿತ್ತು. ವಾಹನ ಸಂಚಾರ, ಜನಸಂದಣಿ ಹೆಚ್ಚಾಗಿರುವುದು ಸೋಂಕಿನ ಆತಂಕವನ್ನು ಸೃಷ್ಟಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ 20 ಜಿಲ್ಲೆಗಳಲ್ಲಿ ಜೂ.21ರ ವರೆಗೆ ಅನ್ವಯವಾಗುವಂತೆ ಕೋವಿಡ್-19 ಪಾಸಿಟಿವಿಟಿ ದರ ಕಡಿಮೆ ಇರುವ ಕಡೆ ಲಾಕ್‍ಡೌನ್ ವಿನಾಯಿತಿಯನ್ನು ರಾಜ್ಯ ಸರಕಾರ ಘೋಷಿಸಿದೆ. ಆದರೆ, ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ, ರಾತ್ರಿ ಕರ್ಫ್ಯೂ ಮುಂದುವರಿಸಿದ್ದು, ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಸಂಚಾರ, ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದೆ.

ದಿನ ಸಹಿತ ಎಲ್ಲ ಅಂಗಡಿ ಮುಗ್ಗಟ್ಟುಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 2ಗಂಟೆಯ ವರೆಗೆ ಅವಕಾಶ ಕಲ್ಪಿಸಿದ್ದು, ಎಂದಿನಂತೆ ತೆರೆದಿದ್ದು ವಾಣಿಜ್ಯ ಚಟುವಟಿಕೆಗಳು ಆರಂಭವಾಗತೊಡಗಿವೆ. ಅಂಗಡಿ ಮುಗ್ಗಟ್ಟುಗಳು, ಹೊಟೇಲ್ ರೆಸ್ಟೋರೆಂಟ್‍ಗಳ ಬಳಿ ಗ್ರಾಹಕರ ಸಂಖ್ಯೆ ಬೆರಳಿಕೆಯಷ್ಟಿತ್ತು. ಕೆಲವುಗಳಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಲಾಕ್‍ಡೌನ್ ಸಡಿಲಿಕೆ ಬೆನ್ನಲ್ಲೆ ಹಳ್ಳಿಗಳಿಗೆ ತೆರಳಿದ್ದ ಸಾವಿರಾರು ಮಂದಿ ಸಾರ್ವಜನಿಕರು ನಿನ್ನೆಯಿಂದಲೇ ರಾಜಧಾನಿ ಬೆಂಗಳೂರು ಸೇರಿದಂತೆ ನಗರಗಳಿಗೆ ಆಗಮಿಸತೊಡಗಿದ್ದು, ಆರ್ಥಿಕ ಚಟುವಟಿಕೆಗಳು ಪುನರ್ ಆರಂಭವಾಗಿವೆ. ಊರುಗಳಿಗೆ ತೆರಳಿದ್ದ ಜನರು ಸಿಕ್ಕ-ಸಿಕ್ಕ ವಾಹನಗಳಲ್ಲಿ ಬೆಂಗಳೂರಿಗೆ ಈಗಾಗಲೇ ಬರಲಾರಂಭಿಸಿದ್ದು ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿರುವ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ಬೆಂ.ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು ಜಿಲ್ಲೆಗಳಲ್ಲಿ ಜೂ.21ರ ಬೆಳಗ್ಗೆ 6ಗಂಟೆಯ ವರೆಗೆ ಲಾಕ್‍ಡೌನ್ ಹೇರಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಸಿದರೆ ಇತರೆ ಎಲ್ಲ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ರಾತ್ರಿ 7 ಗಂಟೆಯಿಂದ ಬೆಳಗ್ಗೆ 5ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಹಾಗೂ ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವಾರಂತ್ಯದ ಕರ್ಫ್ಯೂ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News