ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್‌ ನಿಧನ: ದೃಢಪಡಿಸಿದ ವೈದ್ಯರು

Update: 2021-06-15 02:31 GMT

ಬೆಂಗಳೂರು, ಜೂ.15: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್‌ ಮಂಗಳವಾರ ಮುಂಜಾನೆ 3.34ಕ್ಕೆ ನಿಧನರಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ವಿಜಯ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆ ವೈದ್ಯ ಅರುಣ್‌ ನಾಯಕ್‌ ಈ ಬಗ್ಗೆ ವೈದ್ಯಕೀಯ ಬುಲೆಟಿನ್‌ನಲ್ಲಿ ಅಧಿಕೃತ ಮಾಹಿತಿ ನೀಡಿದ್ದಾರೆ.

ಜೂನ್‌ 12ರಂದು ರಾತ್ರಿ ವಿಜಯ್‌ ಅವರಿಗೆ ಅಪಘಾತವಾಗಿತ್ತು. ಅಪೋಲೊ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕಕ್ಕೆ ಅವರನ್ನು ಕರೆತರುವ ವೇಳೆಯೇ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರ ಮಿದುಳಿನ ಸಿಟಿ ಸ್ಕ್ಯಾನ್‌ ನಡೆಸಿದ ಸಂದರ್ಭದಲ್ಲಿ, ಮಿದುಳಿಗೆ ಬಲವಾದ ಪೆಟ್ಟುಬಿದ್ದಿರುವುದು ಕಂಡುಬಂದಿತ್ತು. ಜೊತೆಗೆ ಮಿದುಳಿನೊಳಗೆ ರಕ್ತಸ್ರಾವವೂ ಆಗಿತ್ತು. ರಕ್ತಸ್ರಾವವನ್ನು ತಡೆಯಲು ತಕ್ಷಣದಲ್ಲೇ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನ್ಯೂರೊ ಐಸಿಯುವಿನಲ್ಲಿ, ಕೃತಕ ಆಮ್ಲಜನಕದಲ್ಲಿ ಉಸಿರಾಡುತ್ತಿದ್ದ ವಿಜಯ್‌ ಅವರು ಕೋಮಾದಲ್ಲಿದ್ದರು. ವಿಜಯ್‌ ಅವರ ಮಿದುಳು ನಿಷ್ಕ್ರಿಯವಾಗಿದೆ ಎಂದು ವೈದ್ಯ ಅರುಣ್‌ ಅವರು ಸೋಮವಾರ ತಿಳಿಸಿದ್ದರು.

ಅಂತಿಮ ದರ್ಶನಕ್ಕೆ ವ್ಯವಸ್ಥೆ

ಮಂಗಳವಾರ ಬೆಳಗ್ಗೆ 8ರಿಂದ 10 ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸಾವಿನಲ್ಲೂ ಸಾರ್ಥಕತೆ: ಸಾವಿನಲ್ಲೂ ಸಂಚಾರಿ ವಿಜಯ್‌ ಅವರು ಸಾರ್ಥಕತೆ ಮೆರೆದಿದ್ದು, ಅವರ ಕುಟುಂಬದ ಅನುಮತಿಯೊಂದಿಗೆ ಏಳು ಅಂಗಾಂಗಳನ್ನು ದಾನ ಮಾಡಲಾಗಿದೆ. ‘ಕಣ್ಣು, ಪಿತ್ತಕೋಶ, ಮೂತ್ರಪಿಂಡ, ಹೃದಯದ ಕವಾಟಗಳನ್ನು ದಾನ ಮಾಡಲಾಗಿದ್ದು, ಏಳು ಜನರಿಗೆ ಇದರಿಂದ ಸಹಕಾರಿಯಾಗಲಿದೆ. ಸಂಬಂಧಪಟ್ಟ ಆಸ್ಪತ್ರೆಗಳು ಈಗಾಗಲೇ ಅಂಗಾಂಗಗಳನ್ನು ತೆಗೆದುಕೊಂಡು ಹೋಗಿದ್ದು, ಅಲ್ಲಿ ಕಸಿ ನಡೆಯುತ್ತಿದೆ’ ಎಂದು ಜೀವ ಸಾರ್ಥಕತೆ ತಂಡದ ನೌಷಾದ್‌ ಪಾಷಾ ಮಾಹಿತಿ ನೀಡಿದ್ದಾರೆ.

ಗೊಂದಲದಲ್ಲಿ ಸಂತಾಪ: ನಟ ಸಂಚಾರಿ ವಿಜಯ್ ಅವರು ನಿಧನ ಹೊಂದಿದ್ದಾರೆ ಎನ್ನುವ ವೈದ್ಯರ ಅಧಿಕೃತ ಹೇಳಿಕೆ ಮುನ್ನವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ಗಣ್ಯರು, ಕಲಾವಿದರು, ವಿಜಯ್ ಅಭಿಯಾನಿಗಳು, ಅವರ ಆಪ್ತರು ಕಂಬನಿ ಮಿಡಿದಿದ್ದರು. ಈ ಪೈಕಿ ಕೆಲವರು ತದನಂತರ ತಮ್ಮ ಸಂದೇಶಗಳನ್ನು ಅಳಿಸಿ, ಅವರ ಆರೋಗ್ಯ ಚೇತರಿಕೆ ಆಗಲಿ ಎಂದು ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News