ನಾಲ್ಕು ಮುಸ್ಲಿಂ ಕುಟುಂಬಗಳಿಗಾಗಿ ಮಸೀದಿ ನಿರ್ಮಾಣಕ್ಕೆ ಜತೆಯಾದ ಎಲ್ಲಾ ಸಮುದಾಯಗಳು

Update: 2021-06-15 07:50 GMT
photo: indianexpress

ಅಮೃತಸರ್: ಪಂಜಾಬ್‍ನ ಮೋಗ ಎಂಬಲ್ಲಿರುವ ಭೂಲಾರ್ ಎಂಬ ಗ್ರಾಮದಲ್ಲಿ ಏಳು ಗುರುದ್ವಾರಗಳು ಹಾಗೂ ಎರಡು ದೇವಸ್ಥಾನಗಳಿವೆ. ಈಗ ಈ ಗ್ರಾಮದಲ್ಲಿರುವ ಕೇವಲ ನಾಲ್ಕು ಮುಸ್ಲಿಂ ಕುಟುಂಬಗಳಿಗಾಗಿ ಒಂದು ಮಸೀದಿಯೂ ನಿರ್ಮಾಣಗೊಳ್ಳಲಿದೆ. ಈ  ಕಾರ್ಯಕ್ಕಾಗಿ ಗ್ರಾಮದ ಎಲ್ಲಾ ಸಮುದಾಯಗಳೂ ಕೈಜೋಡಿಸಿವೆ.

ಕಳೆದ ರವಿವಾರ ಮಸೀದಿಯ ಶಂಕುಸ್ಥಾಪನೆ ಸಮಾರಂಭ ಜರುಗಿದಾಗ ಭಾರೀ ಮಳೆ ಸುರಿದಾಗ ಕಾರ್ಯಕ್ರಮ ಆಯೋಜಿಸಲು ಗ್ರಾಮದ ಗುರುದ್ವಾರ ತನ್ನ ಬಾಗಿಲನ್ನು ತೆರೆದು ಹೃದಯವೈಶಾಲ್ಯತೆ ಮೆರೆದಿದೆ.

ಕೆಲವೇ ಗಂಟೆಗಳೊಳಗಾಗಿ ಸಿಖ್ ಹಾಗೂ ಹಿಂದು ಬಾಂಧವರು ಎಲ್ಲಾ ಏರ್ಪಾಟುಗಳನ್ನು ಮಾಡಿದರು. ಬಿಸಿ ಬಿಸಿ ಜಿಲೇಬಿಯನ್ನು ಲಂಗರ್‍ನಲ್ಲಿ ತಯಾರಿಸಲಾಯಿತು. ಶಂಕುಸ್ಥಾಪನಾ ಸಮಾರಂಭದ ಯಶಸ್ಸಿಗಾಗಿ ಪ್ರಾರ್ಥನೆಗಳು ಜರುಗಿದವು.

ದೇಶ ವಿಭಜನೆಗಿಂತ ಮುನ್ನ ಈ ಗ್ರಾಮದಲ್ಲಿ ಒಂದು ಮಸೀದಿ ಇತ್ತಾದರೂ ಅದು ನಂತರ ಸಮಯ ಸಂದಂತೆ ಪಾಳು ಬಿದ್ದಿತ್ತು. ಗ್ರಾಮದಲ್ಲಿ ಹಿಂದುಗಳು ಹಾಗೂ ಸಿಖ್ಖರಿಗೆ ಆರಾಧನಾಲಯಗಳಿರುವುದರಿಂದ ಮುಸ್ಲಿಮರಿಗೂ ಒಂದು ಪ್ರಾರ್ಥನಾ ಸ್ಥಳವಿರಲೆಂದು ಈ ಹಿಂದೆ ಮಸೀದಿ ಇದ್ದ ಸ್ಥಳದಲ್ಲಿಯೇ ಅದನ್ನು ನಿರ್ಮಿಸಲು ನಿರ್ಧರಿಸಲಾಗಿತ್ತು.

ಗ್ರಾಮದ ಎಲ್ಲಾ ಸಮುದಾಯದವರು ಮಸೀದಿ ನಿರ್ಮಾಣಕ್ಕೆ  ದೇಣಿಗೆ ನೀಡಿದ್ದಾರೆ. ಮಸೀದಿ ನಿರ್ಮಾಣಕ್ಕೆ ಇಡೀ ಗ್ರಾಮದ ಸಹಕಾರ ದೊರೆಯಲಿದೆಯೆಂದು ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸರಪಂಚ ಬೋಹರ್ ಸಿಂಗ್ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೈಬ್ ಶಾಹಿ ಇಮಾಮ್ ಮೌಲಾನ ಮೊಹಮ್ಮದ್ ಉಸ್ಮಾನ್ ರಹಮಾನಿ ಲುಧಿಯಾನ್ವಿ ಗ್ರಾಮಸ್ಥರ ಸಹಕಾರಕ್ಕಾಗಿ ಧನ್ಯವಾದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News