ಕಾಂಗ್ರೆಸ್ ನವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಅಲ್ಲಿಗೇ ಹೋಗಲಿ: ಸಿ.ಟಿ.ರವಿ
ಚಿಕ್ಕಮಗಳೂರು, ಜೂ.15: ಕಾಶ್ಮೀರದಲ್ಲಿ 370ನೇ ವಿಧಿಯ ಪುನರ್ ಸ್ಥಾಪನೆಗೆ ಮತ್ತೆ ಅವಕಾಶ ನೀಡಲ್ಲ. ಹಾಗೇನಾದರೂ ಮಾಡಲು ಪ್ರಯತ್ನಿಸುವವರು ಇತಿಹಾಸದ ಪುಟಗಳಲ್ಲಿ ಕಳೆದು ಹೋಗುತ್ತಾರೆ. ಕಾಂಗ್ರೆಸ್ ಮುಖಂಡರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದಲ್ಲಿ ಪಾಕಿಸ್ತಾನಕ್ಕೆ ಹೋಗಲಿ ಎಂದು ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ನಗರದ ಬಿಜೆಪಿ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದಲ್ಲಿ 370 ವಿಧಿಯನ್ನು ರದ್ದು ಮಾಡಿರುವುದು ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ಇದೆ. 370ನೇ ವಿಧಿಯ ರದ್ದತಿ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದನೆ, ಭಷ್ಟಾಚಾರ ಸಂಪೂರ್ಣವಾಗಿ ನಿಂತಿದೆ. ಅಲ್ಲಿನ ತಳ ಸಮುದಾಯದ ಜನರಿಗೆ ಅಂಬೇಡ್ಕರ್ ಸಂವಿಧಾನದ ಮೀಸಲಾತಿ ಸಿಗುತ್ತಿದೆ. ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪನೆಗೆ ಮುಂದಾಗುವವರು ಇತಿಹಾಸದಲ್ಲಿ ಕಳೆದು ಹೋಗಲಿದ್ದಾರೆ ಎಂದರು.
ದೇಶದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ವಿರೋಧಿ ನಿಲುವು ತೆಗೆದುಕೊಳ್ಳುತ್ತಿರುವುದು ಹೊಸದೇನಲ್ಲ. ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ನೀಡಿರುವ ಹೇಳಿಕೆ ರಾಷ್ಟ್ರೀಯ ಹಿತರಕ್ಷಣೆಯ ವಿರೋಧಿಯಾಗಿದೆ. ಕಾಶ್ಮೀರದಲ್ಲಿ 370ನೇ ವಿಧಿಯಿಂದಾಗಿ ಅಲ್ಲಿ ಭ್ರಷ್ಟಾಚಾರ ನಡೆಸಲು, ಭಯೋತ್ಪಾದನೆಯನ್ನು ಬೆಂಬಲಿಸಲು, ನಿರಾಶ್ರಿತರನ್ನು ಹೊರದೂಡಲು ಕಾರಣವಾಗಿತ್ತು. ದೇಶದ ಸಂವಿಧಾನ ಅಲ್ಲಿ ಅನುಷ್ಠಾನವಾಗಿರಲಿಲ್ಲ, ಮೀಸಲಾತಿ ಅಲ್ಲಿಯ ಜನರಿಗೆ ದೊರೆತಿರಲಿಲ್ಲ, ಭ್ರಷ್ಟಾಚಾರವನ್ನು ತನಿಖೆ ಮಾಡುವ ಅಧಿಕಾರ ತನಿಖಾ ಸಂಸ್ಥೆಗಳಿಗೆ ಇರಲಿಲ್ಲ. ಪ್ರಧಾನಿ ಮೋದಿ ದಿಟ್ಟತನದಿಂದಾಗಿ ಆ ವಿಧಿಯನ್ನು ರದ್ದುಪಡಿಸಿದ್ದಾರೆಂದು ತಿಳಿಸಿದರು.
ದಿಗ್ವಿಜಯ ಸಿಂಗ್ ಹೇಳಿಕೆ ಭಾರತ ವಿರೋಧಿಯಾಗಿದೆ. ದೇಶದ ಪ್ರತಿಷ್ಠೆಯನ್ನು ಹರಾಜು ಹಾಕುವ, ಕ್ಷೋಭೆಯನ್ನುಂಟು ಮಾಡುವ ಪಾಕಿಸ್ತಾನಪರ ವಕಾಲತ್ತು ವಹಿಸುವುದಾಗಿದೆ. ಸರ್ಜಿಕಲ್ ದಾಳಿ ನಡೆದಾಗ ದೇಶದ ಸೈನಿಕರ ಸಾಮರ್ಥ್ಯವನ್ನು ಅಪಮಾನಿಸುವಂತಾಗಿತ್ತು ಎಂದ ಅವರು, ಕೆಲವು ಕಾಂಗ್ರೆಸ್ಸಿಗರ ಮಾನಸಿಕತೆ ಪಾಕಿಸ್ತಾನ, ಚೀನಾ ಪರವಾಗಿದೆ. ಕಾಂಗ್ರೆಸ್ ಮುಖಂಡರ ಹೇಳಿಕೆಗಳಿಂದ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನವಾದ ವಿಷಯಗಳು ಮಹತ್ವ ಕಳೆದುಕೊಂಡಂತಾಗಿದೆ. ಕಾಶ್ಮೀರದಲ್ಲಿ ಜಾರಿಯಲ್ಲಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ್ದರ ಪರಿಣಾಮವಾಗಿ ಅಂಬೇಡ್ಕರ್ ರಚನೆಯ ಸಂವಿಧಾನ ಕಾಶ್ಮೀರದಲ್ಲೂ ಜಾರಿಯಾಗುವಂತಾಗಿದೆ. ಕಾಶ್ಮೀರದ ದಲಿತರಿಗೆ ಮೀಸಲಾತಿ ಸಿಕ್ಕಿದಂತಾಗಿದೆ ಎಂದು ಶಾಸಕ ಸಿ.ಟಿ.ರವಿ ನುಡಿದರು.
ಬೆಲೆ ಏರಿಕೆಗೆ ಸಮರ್ಥನೆ: ವಿದೇಶಗಳಿಂದ ಶೇ.85ರಷ್ಟು ಇಂಧನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯಾಗಿರುವುದೇನೋ ನಿಜ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬ್ಯಾರಲ್‍ವೊಂದಕ್ಕೆ ಶೇ.46ರಷ್ಟು ಹೆಚ್ಚಳವಾಗಿದ್ದರಿಂದ ಬೆಲೆ ಹೆಚ್ಚಳವಾಗಲೂ ಕಾರಣವಾಗಿದೆ ಎಂದು ಇಂಧನ ಬೆಲೆ ಏರಿಕೆಯನ್ನು ಶಾಸಕ ಸಿ.ಟಿ.ರವಿ ಸಮರ್ಥಿಸಿಕೊಂಡರು.
ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ವ್ಯಾಟ್ ತೆರಿಗೆ ಇಳಿಸುವ ಮೂಲಕ ಬೇರೆ ರಾಜ್ಯಗಳಿಗೆ ಮಾದರಿಯಾಗಲಿ. ಕಳೆದ 2006ರಿಂದ 2010ರವರೆಗೆ ಆಯಿಲ್ ಬಾಂಡ್ ತರುವ ಮೂಲಕ ಕಾಂಗ್ರೆಸ್ ಪಕ್ಷ ಮಾಡಿದ ಪಾಪದ ಹೊರೆಯನ್ನು ಬಿಜೆಪಿ ಇಂದು ತೀರಿಸುವಂತಾಗಿದೆ. ಕಾಂಗ್ರೆಸ್ ಮುಖಂಡರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಆ ದೇಶಕ್ಕೆ ಹೋಗಬಹುದಾಗಿದೆ. ಒಂದು ವೇಳೆ ಹೋದರೂ ಭಾರತದಲ್ಲಿರುವ ನೆಮ್ಮದಿ ಆ ದೇಶದಲ್ಲಿ ಸಿಗದು ಎಂದರು.
ಮೋದಿ ಸರಕಾರ ಆಹಾರ ಧಾನ್ಯ ಮತ್ತು ರಸಗೊಬ್ಬರಕ್ಕೆ ಸಹಾಯಧನ ನೀಡುತ್ತಿದೆ. ಜೋಳಕ್ಕೆ ಶೇ.83, ರಾಗಿಗೆ ಶೇ.125 ರಷ್ಟು ಸಹಾಯಧನವಿದೆ ಎಂದು ಹೇಳಿದ ಶಾಸಕ ಸಿ.ಟಿ.ರವಿ, ಪ್ರತೀ ಚುನಾವಣೆಯಲ್ಲಿ ಪಾಠ ಕಲಿಯದ ಕಾಂಗ್ರೆಸ್ ದೇಶ ವಿರೋಧಿ ನೀತಿಗಳಿಂದಾಗಿಯೇ ಅವನತಿ ಹೊಂದಲಿದೆ. ಕಾಂಗ್ರೆಸ್ ಭಾರತವನ್ನು ಅಪಮಾನಿಸುವ ಮೂಲಕ ಪಾಕಿಸ್ತಾನವನ್ನು ಓಲೈಸುತ್ತಿದೆ ಎಂದು ತಿಳಿಸಿದರು.
ರಾಮನ ಬಗ್ಗೆ ಹುಟ್ಟಿದ ಪ್ರೀತಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಗ್ರಹಿಸಿದ ಸಾರ್ವಜನಿಕ ದೇಣಿಗೆಯನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕುರಿತು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡುತ್ತಿದ್ದಾರೆ. ರಾಮನ ಅಸ್ತಿತ್ವವನ್ನೆ ಕೆಣಕಿದ್ದ ಕಾಂಗ್ರೆಸ್ ಮುಖಂಡರಿಗೆ ಈಗ ರಾಮನ ಬಗ್ಗೆ ಪ್ರೀತಿ ಹುಟ್ಟಿಕೊಂಡಿದೆ. ರಾಮಮಂದಿರ ಟ್ರಸ್ಟ್ ನಲ್ಲಿರುವವರು ಸ್ವಾರ್ಥಿಗಳಲ್ಲ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ನಗರ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಕನಕರಾಜ್ ಅರಸ್, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕೌಶಿಕ್, ನಗರ ಅಧ್ಯಕ್ಷ ದಿನೇಶ್ ಸುದ್ದಿಗೋಷ್ಠಿಯಲ್ಲಿದ್ದರು.