ನಾಯಕತ್ವದ ಬಗ್ಗೆ ರಾಜ್ಯದಲ್ಲಿ ಯಾವುದೇ ಗೊಂದಲಗಳಿಲ್ಲ: ಸಿಎಂ ಯಡಿಯೂರಪ್ಪ

Update: 2021-06-15 14:10 GMT

ಬೆಂಗಳೂರು, ಜೂ.15: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಳೆ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯದಲ್ಲಿ ನಾಯಕತ್ವದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅಂತಹ ಚರ್ಚೆಯೂ ಸದ್ಯಕ್ಕೆ ನಡೆದಿಲ್ಲ ಎಂದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ರಾಜ್ಯದ ಉಸ್ತುವಾರಿಯಾಗಿದ್ದು, ಅವರನ್ನು ಪಕ್ಷದ ಮುಖಂಡರು, ಶಾಸಕರು, ಸಚಿವರು, ಸಂಸದರು ಯಾರೂ ಬೇಕಾದರೂ ಭೇಟಿ ಮಾಡಿ ಚರ್ಚೆ ನಡೆಸಬಹುದಾಗಿದೆ ಎಂದರು.

ಕುಮಾರಕೃಪಾ ಅತಿಥಿ ಗೃಹದಲ್ಲಿ ಅರುಣ್ ಸಿಂಗ್ ವಾಸ್ತವ್ಯ ಹೂಡಲಿದ್ದು, ಎಲ್ಲ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿ, ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲಿದ್ದಾರೆ. ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಯಾವುದೇ ಗೊಂದಲಗಳು ಇಲ್ಲ. ನಾನು ಅವರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ರಾಜ್ಯದಲ್ಲಿ ಈಗಾಗಲೆ ಲಾಕ್‍ಡೌನ್‍ಗೆ ಸಂಬಂಧಿಸಿದ ಮೊದಲ ಹಂತದ ಅನ್‍ಲಾಕ್ ಘೋಷಣೆ ಮಾಡಲಾಗಿದೆ. ಎರಡನೆ ಹಂತದಲ್ಲಿ ಯಾವ ಚಟುವಟಿಕೆಗಳಿಗೆ ವಿನಾಯಿತಿ ನೀಡಬೇಕು ಎಂಬುದರ ಬಗ್ಗೆ ಇವತ್ತು, ನಾಳೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿರುವುದರಿಂದ ಎರಡನೆ ಹಂತದ ಅನ್‍ಲಾಕ್ ಕುರಿತು ನಿರ್ಧರಿಸುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈಗಾಗಲೆ ವಿನಾಯಿತಿ ನೀಡಲಾಗಿರುವ ಕ್ಷೇತ್ರಗಳ ಜೊತೆಗೆ ಇತರ ಕ್ಷೇತ್ರಗಳಿಗೂ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ತಜ್ಞರ ಅಭಿಪ್ರಾಯದಂತೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News