ರಾಮಮಂದಿರದ ದೇಣಿಗೆಯಲ್ಲಿ ಭ್ರಷ್ಟಾಚಾರ ದೇಶಕ್ಕೇ ದೊಡ್ಡ ಅಪಮಾನ: ಡಿ.ಕೆ.ಶಿವಕುಮಾರ್

Update: 2021-06-15 16:19 GMT

ಮಂಡ್ಯ, ಜೂ.15: ರಾಮ ಮಂದಿರ ನಿರ್ಮಾಣಕ್ಕೆ ಜನಸಾಮಾನ್ಯರು ನೀಡಿದ್ದ ದೇಣಿಗೆಯಲ್ಲಿ ಭೂಮಿ ಖರೀದಿಯಲ್ಲಿ ನಡೆದಿರುವ ಭಷ್ಟಾಚಾರ ಎಸಗಿರುವುದು ದೇಶಕ್ಕೇ ದೊಡ್ಡ ಅಪಮಾನ. ಭಾರತೀಯ ಸಂಸ್ಕೃತಿಗೆ ಮಾಡಿದ ಅಪಚಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ತಾಲೂಕಿನ ಯಲಿಯೂರು ಸರ್ಕಲ್ ಬಳಿಯಿರುವ ಪೆಟ್ರೋಲ್ ಬಂಕ್ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದರು. ಜನರು ನೀಡಿರುವ ಹಣವನ್ನು ರಾಮ ಮಂದಿರ ಟ್ರಸ್ಟ್ ಹಿಂದಿರುಗಿಸಬೇಕು. ಹಗರಣದಲ್ಲಿ ಭಾಗಿಯಾಗಿರುವವರನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಅವರು ಕೇಂದ್ರ ಮತ್ತು ಉತ್ತರಪ್ರದೇಶ ಸರಕಾರಗಳನ್ನು ಅವರು ಒತ್ತಾಯಿಸಿದರು.

ಪಿಕ್ ಪಾಕೆಟ್ ಸರಕಾರ: ಬಿಜೆಪಿ ಸರಕಾರ ಪಿಕ್ ಪಾಕೆಟ್ ಸರಕಾರ. ವರ್ಷದಲ್ಲಿ ಲೀಟರ್ ಪೆಟ್ರೋಲ್ ಮೇಲೆ 65 ರೂ. ತೆರಿಗೆ ಹಾಕಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಜೇಬಿಗೆ ಕತ್ತರಿ ಹಾಕುತ್ತಿವೆ. ಇಂಧನ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯು ಕೂಡ ಗಗನಕ್ಕೇರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಮಾರ್ಚ್, ಎಪ್ರಿಲ್ ಹೊರತುಪಡಿಸಿ ಈ ವರ್ಷ 51 ಬಾರಿ ಪೆಟ್ರೋಲ್, ಡೀಸಲ್ ದರ ಏರಿಕೆ ಮಾಡಲಾಗಿದೆ. ಇದರ ವಿರುದ್ಧ ಇಡೀ ದೇಶದ ಜನಸಾಮಾನ್ಯರು ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಇದು ಕೇವಲ ಕಾಂಗ್ರೆಸ್ ಪ್ರತಿಭಟನೆಯಲ್ಲ ಎಂದು ಅವರು ಹೇಳಿದರು.

ಯುಪಿಎ ಸರಕಾರದಲ್ಲಿ ಪೆಟ್ರೋಲ್ ಬೆಲೆ 52 ರೂ. ಆದಾಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ಸೈಕಲ್ ತುಳಿದು ಪ್ರತಿಭಟಿಸಿದ್ದರು. ಈಗ ಅವರ ಸರಕಾರದ ವಿರುದ್ಧ ಸುಮ್ಮನೆ ಕುಳಿತಿರುವುದು ಏಕೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಮಂಡ್ಯದ 7 ಸ್ಥಾನಗಳನ್ನೂ ಗೆಲ್ಲುತ್ತೇವೆ: ಇದಕ್ಕೂ ಮುನ್ನ ಮದ್ದೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮಂಡ್ಯದ 7 ಸ್ಥಾನಗಳನ್ನೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮನ್‍ಮುಲ್ ಹಾಲು ಹಗರಣದ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾತನಾಡುತ್ತೇನೆ. ಬಿಜೆಪಿ ಪರಿಸ್ಥಿತಿ ದೊಡ್ಡ ಕತೆಯಾಗಿದ್ದು, ಅದರ ಬಗ್ಗೆ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ. ನಾಯಕತ್ವ ಬದಲಾವಣೆ ಅವರ ಪಕ್ಷದ ವಿಚಾರ. ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವರಾದ  ಎನ್.ಚಲುವರಾಯಸ್ವಾಮಿ, ಎಂ.ಎಸ್. ಆತ್ಮಾನಂದ, ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾ ಉಸ್ತುವಾರಿ ಸಂಪಂಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್, ಎಂ.ಡಿ.ಜಯರಾಂ, ಸಿದ್ದರಾಮೇಗೌಡ, ಹಾಲಹಳ್ಳಿ ರಾಮಲಿಂಗಯ್ಯ, ರಮೇಶ್ ಮಿತ್ರ, ಅಪ್ಪಾಜಿ, ಸುಂಡಹಳ್ಳಿ ಮಂಜುನಾಥ್, ಸಿ.ಎಂ.ದ್ಯಾವಪ್ಪ, ಇತರ ಮುಖಂಡರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News