ವಿದೇಶಕ್ಕೆ ತೆರಳುವ ವಿದ್ಯಾರ್ಥಿ, ನೌಕರರು, ಕ್ರೀಡಾಪಟುಗಳಿಗೆ ಕೋವಿಶೀಲ್ಡ್ 2ನೇ ಡೋಸ್ ನೀಡುವ ಅಂತರ 28 ದಿನಕ್ಕೆ ಇಳಿಕೆ

Update: 2021-06-15 16:23 GMT

ಬೆಂಗಳೂರು, ಜೂ.15: ಕೋವಿಶೀಲ್ಡ್ ಎರಡನೇ ಡೋಸ್ ನೀಡುವ 84 ದಿನಗಳ ಅಂತರವನ್ನು ವಿದ್ಯಾಭ್ಯಾಸಕ್ಕಾಗಿ, ನೌಕರಿಗಾಗಿ ವಿದೇಶಕ್ಕೆ ತೆರಳುತ್ತಿರುವವರಿಗೆ ಹಾಗೂ ಒಲಿಂಪಿಕ್ಸ್ ಗಾಗಿ ಟೋಕಿಯೋಗೆ ತೆರಳುವ ಆಟಗಾರರಿಗೆ 28 ದಿನಕ್ಕೆ ಇಳಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ತಿಳಿಸಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ನಿರ್ದೇಶಕರು, ಸಂಬಂಧಿಸಿದ ಅಧಿಕಾರಿಗಳು ಸದರಿ ಅರ್ಹ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಲಸಿಕೆ ನೀಡಲು ಅನುಮತಿ ನೀಡಬಹುದಾಗಿದೆ. ಸರಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಮಾತ್ರ ಲಸಿಕೆ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಬೇಕು. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಮಟ್ಟದ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಆಯ್ದ ಕೋವಿಡ್ ಲಸಿಕಾ ಕೇಂದ್ರದಲ್ಲಿ ಈ ಫಲಾನುಭವಿಗಳಿಗೆ ಲಸಿಕೆ ನೀಡುವುದು. ಸಮರ್ಥ ದಾಖಲಾತಿಯನ್ನು ಸಲ್ಲಿಸಿದ ಬಳಿಕವೇ ಲಸಿಕೆಯನ್ನು ನೀಡಬೇಕು.

ರಾಜ್ಯವು ನೀಡಿರುವ ಮಾದರಿ ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಯು ನೀಡುವ ಮಾಹಿತಿಯನ್ನು ಪಡೆದು, ದಾಖಲೆಗಳನ್ನು ಪರಿಶೀಲಿಸಿ ದೃಢೀಕರಣ ಪತ್ರವನ್ನು ನೀಡುವುದು. ಈ ದೃಢೀಕರಣ ಪತ್ರವನ್ನು ಕೋವಿನ್ ಪೋರ್ಟಲ್‍ನಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಅಪ್‍ಲೋಡ್ ಮಾಡಿ ಲಸಿಕೆ ನೀಡಬೇಕು.

ಈಗಾಗಲೇ ಮೊದಲನೇ ಡೋಸ್ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‍ಪಾರ್ಟ್ ನಂಬರನ್ನು ಬಳಸದೇ ಲಸಿಕೆ ಪಡೆದಿದ್ದರೆ ಅಂತಹ ಫಲಾನುಭವಿಗಳಿಗೆ ಕೋವಿಶೀಲ್ಡ್ ನ ಎರಡನೇ ಡೋಸ್ ಲಸಿಕೆ ನೀಡಲು ಅನುಭಂದ-5ರಲ್ಲಿ ಲಗತ್ತಿಸಿದ ಲಸಿಕಾ ಪ್ರಮಾಣ ಪತ್ರವನ್ನು ನೀಡಬೇಕೆಂದು ರಾಷ್ಟ್ರೀಯ ಅರೋಗ್ಯ ಅಭಿಯಾನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News