ವಿಚಾರಣೆಯ ನೇರ ಪ್ರಸಾರಕ್ಕೆ ಪ್ರಕರಣ ಆಯ್ಕೆ ಮಾಡುವಾಗ ನ್ಯಾಯಾಲಯಗಳು ಸೂಕ್ಷ್ಮವಾಗಿರಬೇಕು: ಹೈಕೋರ್ಟ್

Update: 2021-06-15 16:57 GMT

ಬೆಂಗಳೂರು, ಜೂ.15: ವಿಚಾರಣೆಯ ನೇರ ಪ್ರಸಾರಕ್ಕಾಗಿ ಆಯ್ಕೆ ಮಾಡುವ ಪ್ರಕರಣಗಳನ್ನು ನ್ಯಾಯಾಲಯಗಳು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ವೈಯಕ್ತಿಕ ಆರೋಪ ಒಳಗೊಂಡ ಪ್ರಕರಣಗಳು ನೇರ ಪ್ರಸಾರಕ್ಕೆ ಆಯ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ನ್ಯಾಯಪೀಠ, ಈ ಸಲಹೆ ನೀಡಿದೆ. ಪ್ರಕರಣಗಳ ವಿಚಾರಣೆಯ ಬಳಿಕ ಹೈಕೋರ್ಟ್ ತಾನು ಇತ್ತೀಚೆಗೆ ಕೈಗೊಂಡ ವಿಚಾರಣೆಯ ನೇರಪ್ರಸಾರದ ಕುರಿತು ಎಎಜಿ ಧ್ಯಾನ್ ಚಿನ್ನಪ್ಪ ಅವರ ಅಭಿಪ್ರಾಯವನ್ನು ಪೀಠ ಕೇಳಿದ ಬಳಿಕ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಮೇ 31ರಂದು ಕರ್ನಾಟಕ ಹೈಕೋರ್ಟ್ ಪ್ರಾಯೋಗಿಕವಾಗಿ ವಿಚಾರಣೆಯ ನೇರ ಪ್ರಸಾರ ಮಾಡಿತ್ತು. ಆ ಮೂಲಕ ಆ ಹಿರಿಮೆಗೆ ಪಾತ್ರವಾದ ದೇಶದ ಎರಡನೇ ಹೈಕೋರ್ಟ್ ಎನಿಸಿಕೊಂಡಿತು. ಗುಜರಾತ್ ಹೈಕೋರ್ಟ್ ಈ ಸಾಧನೆ ಮಾಡಿದ ಮೊದಲ ನ್ಯಾಯಾಲಯ. ಮುಖ್ಯ ನ್ಯಾಯಮೂರ್ತಿ ಓಕಾ ನೇತೃತ್ವದ ಪೀಠದ ನ್ಯಾಯಾಲಯದ ಹಾಲ್ ನಂ 1ರ ವಿಚಾರಣೆಯನ್ನು ಪ್ರಾಯೋಗಿಕ ನೆಲೆಯಲ್ಲಿ ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ನೇರಪ್ರಸಾರ ಉತ್ತಮ ಕ್ರಮ. ಏಕೆಂದರೆ ಇದು ಮುಕ್ತ ನ್ಯಾಯಾಲಯ ಸಂಸ್ಕೃತಿಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು. ಅಲ್ಲದೆ ವಿಚಾರಣೆ ವೀಕ್ಷಿಸಲು ಜನ ಹೈಕೋರ್ಟ್ ಯೂಟ್ಯೂಬ್ ಚಾನೆಲ್‍ಗೆ ಲಾಗ್-ಇನ್ ಆಗುತ್ತಾರೆ ಎಂದು ಹೇಳಿದರು. ಆದರೆ ಎಲ್ಲವೂ ವಿಚಕ್ಷಣೆಗೆ ಒಳಗಾಗುವುದರಿಂದ ನ್ಯಾಯಾಲಯಗಳಲ್ಲಿ ಹಾಸ್ಯ ಮತ್ತು ವಿನೋದದ ಸನ್ನಿವೇಶಗಳಿಗೆ ವಕೀಲರು ಮುಂದಾಗದೇ ಹೋಗಬಹುದು ಎಂದು ಅವರು “ನ್ಯಾಯಾಲಯ ಹಾಸ್ಯದ ವೇಳೆಯೂ ನಾವು ಜಾಗರೂಕರಾಗಿರಬೇಕಾಗುತ್ತದೆ ಏಕೆಂದರೆ ಎಲ್ಲವೂ ದಾಖಲೀಕರಣವಾಗುತ್ತಿರುತ್ತದೆ” ಎಂದು ನ್ಯಾಯಪೀಠವು ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News