ಶಿವಮೊಗ್ಗ: ಇಂಧನ ಬೆಲೆ ಏರಿಕೆ ಖಂಡಿಸಿ ಭಿತ್ತಿ ಪತ್ರ ಪ್ರದರ್ಶಿಸಿ ಕಾಂಗ್ರೆಸ್ ಪ್ರತಿಭಟನೆ

Update: 2021-06-16 10:13 GMT

ಶಿವಮೊಗ್ಗ, ಜೂ.16: ಇಂಧನ ಬೆಲೆ ಏರಿಕೆ ವಿರೋಧಿಸಿ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್ ನೇತೃತ್ವದಲ್ಲಿ ಕುವೆಂಪು ರಸ್ತೆಯ ನಂದಿ ಪೆಟ್ರೋಲ್ ಬಂಕ್‌ನಲ್ಲಿ ಕಾಂಗ್ರೆಸ್ ಮುಖಂಡರು ಭಿತ್ತಿ ಪತ್ರ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಕೇಂದ್ರ ಸರ್ಕಾರ ಬಡ ಮತ್ತು ಮಧ್ಯ ವರ್ಗದ ಮೇಲೆ ಗದಾಪ್ರಹಾರ ನಡೆಸಿದೆ. ಶ್ರೀಮಂತರಿಗೆ ಮಣೆ ಹಾಕಿದ ಸರ್ಕಾರ ಬಡವರನ್ನು ತುಳಿಯುತ್ತಿದೆ. ಶ್ರೀಸಾಮಾನ್ಯರ ಬದುಕನ್ನು ಕಸಿದುಕೊಂಡು ತೆರಿಗೆಯನ್ನು ಏರಿಸಿ ಅಕ್ಷರಶಃ ಸುಲಿಗೆಗೆ ಇಳಿದಿದೆ. ಈ ಹಗಲು ದರೋಡೆಯ ವಿರುದ್ಧ ಕಾಂಗ್ರೆಸ್ ತನ್ನ ಹೋರಾಟವನ್ನು ಮುಂದುವರೆಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಕೇಂದ್ರ ಸರ್ಕಾರ ಶ್ರೀಮಂತರ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇ.30 ರಿಂದ ಶೇ.22ಕ್ಕೆ ಇಳಿಸಿದೆ. ಆದರೆ ಜನ ಸಾಮಾನ್ಯರು ನಿತ್ಯ ಬಳಸುವ ವಸ್ತುಗಳ ಮೇಲೆ ತೆರಿಗೆ ಏರಿಸಿದೆ. ಗರೀಬಿ ಹಠಾವೋ ಎಂಬ ಇವರ ಘೋಷಣೆ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದ್ದು, ಇದು ಬಂಡವಾಳಶಾಹಿಗಳ ಪರವಾದ ಸರ್ಕಾರ ಎಂದು ಟೀಕಿಸಿದರು.

ಪಾಕಿಸ್ತಾನ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ, ನೇಪಾಳ ಮುಂತಾದ ದೇಶಗಳಲ್ಲಿ ತೈಲಬೆಲೆ 50 ರಿಂದ 70 ರೂ. ಒಳಗೆ ಇದ್ದರೆ ಭಾರತದಲ್ಲಿ ಮಾತ್ರ ಶತಕ ಬಾರಿಸಿದೆ. ಎಲ್‌ಪಿಜಿ ಗ್ಯಾಸ್ ಬೆಲೆಯು ಕೂಡ ಏರಿದೆ. ಕೇಂದ್ರ ಸರ್ಕಾರ ಕೂಡಲೆ ತೈಲ ಬೆಲೆ ಮತ್ತು ಗ್ಯಾಸ್ ಬೆಲೆಯನ್ನು ಇಳಿಸಬೇಕು. ಬೇಕಾಬಿಟ್ಟಿ ಏರಿಸಿರುವ ತೆರಿಗೆಗಳನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೀಶ್, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದರೂ ಕೂಡ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಆಗ ಏರಿಸಿರಲಿಲ್ಲ. ಆದರೆ ಈಗ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಬೆಲೆ ಇಳಿಕೆಯಾಗಿದ್ದರೂ ಕೂಡ ಏರಿಸಲಾಗಿದೆ. ಜನರು ಬಿಜೆಪಿ ಸರ್ಕಾರವನ್ನು ನಂಬಿಕೊಂಡು ಮತ ಹಾಕಿ ಗೆಲ್ಲಿಸಿದ್ದಾರೆ. ಅವರಿಗೆ ನೀವೇನು ಉತ್ತರ ಕೊಡುತ್ತೀರಿ ಎಂದು ಪ್ರಶ್ನಿಸಿದರು.

ಭಾವನಾತ್ಮಕ ವಿಷಯಗಳ ಮೇಲೆ ಬಡವರ ಮೇಲೆ ದಾಳಿ ನಡೆಸುತ್ತಿರುವ ಕೇಂದ್ರ ಸರ್ಕಾರ ತನ್ನ ಭಕ್ತರಿಗೆ ಪ್ರತ್ಯೇಕ ಪೆಟ್ರೋಲ್ ಬಂಕ್‌ಗಳನ್ನು ತೆರೆದು ಅವರ ಹತ್ತಿರ ಎಷ್ಟು ಬೇಕಾದರೂ ತೆರಿಗೆ ವಸೂಲು ಮಾಡಲಿ. ಆದರೆ ಬಡವರಿಗೆ ಮಾತ್ರ ತೈಲ ಬೆಲೆಯನ್ನು ಇಳಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ವಿಶ್ವನಾಥ್ ಕಾಶಿ,ರಂಗನಾಥ್, ರವಿಕುಮಾರ್, ಮಂಜುಳಾ ಶಿವಣ್ಣ, ನವೀನ್, ದೇವೇಂದ್ರಪ್ಪ, ಕುಮರೇಶ್, ರಂಗೇಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News