ವಾಹನ ಸಂಚಾರಕ್ಕೆ ಮುಕ್ತವಾದ ಹುಲಿಕಲ್ ಘಾಟ್ ರಸ್ತೆ

Update: 2021-06-16 10:15 GMT

ಶಿವಮೊಗ್ಗ,ಜೂ.16: ಮಧ್ಯ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಬಹುಮುಖ್ಯ ಸಾರಿಗೆ ಸಂಪರ್ಕದ ಕೊಂಡಿಯಾಗಿರುವ ಶಿವಮೊಗ್ಗ ಜಿಲ್ಲೆಯ ಹುಲಿಕಲ್ ಘಾಟ್‌ನಲ್ಲಿ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಒಂದೂವರೆ ತಿಂಗಳಿನಿಂದ ನಡೆಯುತ್ತಿದ್ದ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಆರಗ ಜ್ಞಾನೇಂದ್ರ ರಸ್ತೆ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಜ್ಯ ಹೆದ್ದಾರಿ- 52ರ ಹುಲಿಕಲ್ ಘಾಟ್‌ನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ 1.5 ಕಿಮೀ ಉದ್ದದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕಾಮಗಾರಿ ಕಳೆದ ಎಪ್ರಿಲ್ 22ರಿಂದ ಪ್ರಾರಂಭವಾಗಿತ್ತು. ಕಳೆದ ಕೆಲ ವರ್ಷಗಳಿಂದ ಹುಲಿಕಲ್ ಘಾಟ್ ರಸ್ತೆಯಲ್ಲಿ ಡಾಂಬರು ರಸ್ತೆ ನಿರಂತರ ಹಾಳಾಗುತ್ತಾ ಸುಗಮ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿತ್ತು. ಶಾಸಕ ಆರಗ ಜ್ಞಾನೇಂದ್ರ ರಸ್ತೆ ದುರಸ್ತಿಗೆ 4 ಕೋಟಿ ರೂ. ಸರ್ಕಾರದದಿಂದ ಮಂಜೂರು ಮಾಡಿಸಿದ್ದರು.

ಹುಲಿಕಲ್ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ವರೆಗಿನ 800 ಮೀ. ಹಾಗೂ ಘಾಟಿ ಚಂಡಿಕಾಂಬ ದೇಗುಲದ ಮೂಲಕ ಹೇರ್‌ಪಿನ್ ತಿರುವುವರೆಗಿನ 700 ಮೀ. ಉದ್ದದ ರಸ್ತೆ ಇದೀಗ ಹೊಸತಾಗಿ ನಿರ್ಮಾಣಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News