ಇಂಧನ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗದಲ್ಲಿ ಡಿಕೆಶಿ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ

Update: 2021-06-16 10:17 GMT

ಶಿವಮೊಗ್ಗ,ಜೂ.16: ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆ, ಹೆಚ್ಚುತ್ತಿರುವ ಹಣದುಬ್ಬರ, ಕೊರೋನ ನಿಯಂತ್ರಣದಲ್ಲಿ ವಿಫಲತೆ, ಲಸಿಕೀಕರಣದಲ್ಲಿನ ವಿಳಂಬ ಮತ್ತಿತರೆ ಅಂಶಗಳು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಸರ್ಕಾರದ ಆಡಳಿತ ವೈಖರಿ ಮಕ್ಕಳ ಆಟದ ಕುದುರೆಯಂತಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ವ್ಯಂಗ್ಯವಾಡಿದರು.

ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಕೇಂದ್ರ ಸರ್ಕಾರದ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ತಾಲೂಕಿನ ಪಿಳ್ಳಂಗಿರಿ ಪೆಟ್ರೋಲ್ ಬಂಕ್ ಬಳಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗೋಡಾ ಹೈ ಮೈದಾನ್ ಹೈ (ಕುದುರೆ ಇದೆ- ಮೈದಾನವಿದೆ) ಎಂದು ಆಡಳಿತ ನಡೆಸುತ್ತಿರುವ ಪ್ರಧಾನಿ ಮೋದಿಯವರ ಆಡಳಿತ ಮಕ್ಕಳ ಆಟದ ಕುದುರೆಯಂತಾಗಿದೆ. ಹಿಂದಕ್ಕೂ ಹೋಗದೆ ಮುಂದಕ್ಕೂ ಹೋಗದೇ ನಿಂತಲ್ಲೇ ನಿಂತು ಅಲ್ಲಾಡುತ್ತಿದ್ದರೂ ಓಡುತ್ತಿದೆ ಎಂಬ ಭ್ರಮೆ ಮೂಡಿಸಲಾಗುತ್ತಿದೆ. ಇದೊಂದು ಲಂಗು, ಲಗಾಮಿಲ್ಲದ ಸರ್ಕಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಧುನಿಕ ಸಂಚಾರ ವ್ಯವಸ್ಥೆ ವಾಹನ ಆಧಾರಿತವಾಗಿದೆ. ಆದರೆ ಕೇಂದ್ರ ಸರ್ಕಾರ ವಾಹನ ಬಳಕೆದಾರರ ಕೈಗೆಟುಕದ ರೀತಿಯಲ್ಲಿ ತೈಲ ಬೆಲೆ ಹೆಚ್ಚಿಸುತ್ತಿದೆ. ಇದರಿಂದಾಗಿ ಇಡೀ ದೇಶದ ಸಂಚಾರ ವ್ಯವಸ್ಥೆ ಕುಸಿದು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಚ್ಚಾ ತೈಲ ಹಾಗೂ ತೈಲೋತ್ಪನ್ನಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಇದು ಹೀಗೆ ಮುಂದುವರಿದಲ್ಲಿ ದೇಶ ವ್ಯಾಪ್ತಿ ಆರ್ಥಿಕ ಅರಾಜಕತೆ ಉಂಟಾಗಲಿದೆ ಎಂದು ಎಚ್ಚರಿಸಿದರು.

ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸದಸ್ಯ ಆರ್.ಮೋಹನ್, ಡಿಸಿಸಿ ಎಸ್ಸಿ ಘಟಕ ಜಿಲ್ಲಾಧ್ಯಕ್ಷೆ ಜಿ.ಪಲ್ಲವಿ, ಡಾ.ಶ್ರೀನಿವಾಸ್ ಕರಿಯಣ್ಣ, ಮಾಜಿ ತಾಪಂ ಸದಸ್ಯ ನಾಗರಾಜ್, ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತು, ಗಣೇಶ್, ಲಕ್ಷಾಧಿ, ಪ್ರಕಾಶ್ ಬಂಗಾರಪ್ಪ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News