ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ವೆಚ್ಚ ಮಾಡಿದ ಹಣ ಹಿಂದಿರುಗಿಸಿ: ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಮನವಿ

Update: 2021-06-16 10:44 GMT

ಬೆಂಗಳೂರು, ಜೂ.16: ಆಸ್ಪತ್ರೆಗೆ ಹಣ ಕಟ್ಟಲಾಗದೆ ಪರದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಬಿಲ್ ಕಟ್ಟಲಾಗದೆ, ಹೆಣ ತರಲಾಗದ ಸ್ಥಿತಿಯೂ ಹಲವರಿಗಿದೆ. ಹೀಗಾಗಿ ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ವೆಚ್ಚ ಮಾಡಿರುವ ಹಣವನ್ನು ಹಿಂದಿರುಗಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬೆಂಗಳೂರಿನ ಜಯನಗರ, ಬಿಟಿಎಂ ಬಡಾವಣೆಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಆಯೋಜಿಸಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಕೆ.ಶಿವಕುಮಾರ್ ಮಾತನಾಡಿ, 'ಮಾಧ್ಯಮಗಳ ವರದಿ ಪ್ರಕಾರ ಶೇ.47 ರಷ್ಟು ಜನಸಾಮಾನ್ಯರು ತಮ್ಮ ಬಳಿ ಇದ್ದ ಸಣ್ಣ-ಪುಟ್ಟ ಚಿನ್ನಾಭರಣ ಒತ್ತೆ ಇಟ್ಟು ಜೀವನ ನಡೆಸುತ್ತಿದ್ದಾರೆ. ಅದು ಅವರ ತಪ್ಪಲ್ಲ, ಅವರ ಸಾಲ ಮನ್ನಾ ಮಾಡಿ ಎಂದು ನಾನು ಕೇಳುವುದಿಲ್ಲ. ಆದರೆ ಆಸ್ಪತ್ರೆ ಬಿಲ್ ಕಟ್ಟಲಾಗದೆ ಒದ್ದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಸೇರಿದವರ ಖರ್ಚು 5 ಲಕ್ಷ ರೂಪಾಯಿಗಿಂತ ಕಡಿಮೆ ಆಗಿಲ್ಲ. ಸಾಕಷ್ಟು ಜನ ಹಣ ಕಟ್ಟಲಾಗುತ್ತಿಲ್ಲ ಎಂದು ನನ್ನ ಬಳಿಯೇ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಗೆ ಹೋದವರಲ್ಲಿ ಸಾಕಷ್ಟು ಜನ ಹೆಣವಾಗಿ ಬಂದರು. ಕುಟುಂಬ ಸದಸ್ಯರು ಸತ್ತರೆ, ಆಸ್ಪತ್ರೆ ಬಿಲ್ ಕಟ್ಟಿ ಹೆಣ ತರಲಾಗದ ಸ್ಥಿತಿ ಹಲವರಿಗಿದೆ. ಇವರಿಗೆ ಸರ್ಕಾರ ನೆರವಾಗಬೇಕು ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನ ತಮ್ಮ ಹಣ ತೆಗೆದುಕೊಳ್ಳುವುದರಿಂದ ಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ, ಆಕ್ಸಿಜನ್, ಔಷಧ ಪಡೆಯಲು ಮಾತ್ರವಲ್ಲದೆ, ಕಡೆಗೆ ಶವಸಂಸ್ಕಾರಕ್ಕೂ ಕ್ಯೂ ನಿಲ್ಲುವಂತ ದುಸ್ಥಿತಿ ನಿರ್ಮಾಣವಾಯಿತು. ಇಂತಹ ಕೆಟ್ಟ ಸರ್ಕಾರವನ್ನು ನಾವು ಇದುವರೆಗೂ ನೋಡಿಲ್ಲ. ಈ ಸಮಸ್ಯೆಯಿಂದ ಮುಕ್ತಿ ಸಿಗಬೇಕಾದರೆ ಜನ ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಟೀಕಿಸಿದರು.

ಕೊರೋನ ಮೊದಲ ಹಾಗೂ ಎರಡನೇ ಅಲೆಯಲ್ಲಿ ಬೆಂಗಳೂರಿನ ಜನ ಸಾಮಾನ್ಯರಿಗೆ ಸತತ ನೆರವು ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿದ್ದು, ಬಿಟಿಎಂ ಹಾಗೂ ಜಯನಗರ ಕ್ಷೇತ್ರದಲ್ಲಿ. ಕಳೆದ ವರ್ಷವೂ ನಾನು ಇಲ್ಲಿಗೆ ನಾಲ್ಕು ಬಾರಿ ಆಗಮಿಸಿದ್ದೆ. ಈ ವರ್ಷವೂ ಬಂದಿದ್ದೇನೆ. 50 ಸಾವಿರ ಬಡ ಕುಟುಂಬಗಳಿಗೆ ನಮ್ಮ ನಾಯಕರು ಈ ಸಹಾಯ ಮಾಡುತ್ತಿದ್ದಾರೆ ಎಂದರು.

ಆಹಾರ ಕಿಟ್, ತರಕಾರಿ ಹಾಗೂ ಮೆಡಿಕಲ್ ಕಿಟ್ ಗಳನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದಾರೆಯೇ ಹೊರತು, ಇವರಾರಿಗೂ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ. ಕಾರ್ಮಿಕ ಸಚಿವಾಲಯದಿಂದ ಬಂದ ಫುಡ್ ಕಿಟ್ ಮೇಲೆ ತಮ್ಮ ಫೋಟೋ ಹಾಕಿಕೊಂಡು ಹಂಚುತ್ತಿಲ್ಲ. ಮತದಾರರ ಬದುಕು ಉಳಿಸಲು ನಮ್ಮ ನಾಯಕರು ತಮ್ಮ ಶ್ರಮದ ಹಣದಿಂದ ನೆರವು ನೀಡಿ, ಅಮೋಘ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು. 

'100 ನಾಟೌಟ್' ಜನರ ಹೋರಾಟ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮಾಡಿದ 100 ನಾಟೌಟ್ ಪ್ರತಿಭಟನೆ ಕೇವಲ ಪಕ್ಷದ ಕಾರ್ಯಕ್ರಮ ಅಲ್ಲ. ಅದು ಜನರ ಆಕ್ರೋಶದ ಪ್ರತಿಧ್ವನಿ. ಈ ವರ್ಷ 50ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಬೆಲೆ ಹೆಚ್ಚಳ ಮಾಡಲಾಗಿದೆ. ಅಮೆರಿಕದಲ್ಲೂ ಇಲ್ಲಿಗಿಂತ ಕಡಿಮೆ ಬೆಲೆ ಇದೆ. ಇಲ್ಲಿನ ಬೆಲೆ ಹೆಚ್ಚಳದಿಂದ ದಿನ ಬಳಕೆ ವಸ್ತುಗಳಿಂದ ಹಿಡಿದು ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಆದರೆ ಜನರ ಆದಾಯದಲ್ಲಿ ಏನಾದರೂ ಏರಿಕೆಯಾಗಿದೆಯಾ ? ಇಲ್ಲವೇ ಇಲ್ಲ. ಆದರೆ ಸರ್ಕಾರದ ಬೊಕ್ಕಸ ಮಾತ್ರ ತುಂಬುತ್ತಿದೆ. ಅದೇ ಕಾರಣಕ್ಕೆ ನಾವು ಈ ಸರ್ಕಾರ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಹೇಳುತ್ತಿದ್ದೇವೆ ಎಂದು ತಿಳಿಸಿದರು.

ಕೊರೋನ ವಿಚಾರದಲ್ಲಿ ಡೆತ್ ಆಡಿಟ್ ಮಾಡಿ ಎಂದು ನಾವು ಆಗ್ರಹಿಸಿದೆವು. ಈಗ ನಮ್ಮ ಒತ್ತಾಯದ ಮೇರೆಗೆ ಕೆಲವು ಮೃತರಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುತ್ತೇವೆ ಎಂದು ಹೇಳಿದ್ದಾರೆ. ಯಡಿಯೂರಪ್ಪನವರೇ, ಕೋವಿಡ್ ಚಿಕಿತ್ಸೆಗಾಗಿ ಯಾರೆಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಹಣ ಖರ್ಚು ಮಾಡಿದ್ದಾರೋ, ಅವರಿಗೆ ಆ ಹಣ ಹಿಂದುರಿಗಿಸಿ. ನಿಮ್ಮ ಆಯುಷ್ಮಾನ್ ಭಾರತ ಯೋಜನೆ ಮೂಲಕವಾಗಲಿ ಅಥವಾ ಬೇರೆ ಯಾವುದೇ ಯೋಜನೆಗಳ ಮೂಲಕವಾಗಲಿ ಜನರಿಗೆ ಅವರ ಹಣ ಹಿಂದಿರುಗಿಸಿ ಎಂದು ಕಾಂಗ್ರೆಸ್ ಪರವಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಬಿಜೆಪಿಗೆ ಅಧಿಕಾರ ಕೊಟ್ಟ ಜನರಿಗೆ ವೈರಾಗ್ಯ ಬಂದಿದೆ:

ಕಾರ್ಯಕ್ರಮ ನಂತರ ಬಿಜೆಪಿ ಆಂತರಿಕ ಕಚ್ಚಾಟದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 'ಬಿಜೆಪಿ ಬಂದಾಗಲೆಲ್ಲ ಈ ಸಮಸ್ಯೆ ಉದ್ಭವಿಸುತ್ತಿದೆ. ನಮ್ಮಲ್ಲಿಯೂ ಈ ಹಿಂದೆ ಇಂತಹ ಪರಿಸ್ಥಿತಿ ಇತ್ತು. ಅದರಿಂದ ಪಾಠ ಕಲಿತು ನಾವು ತಪ್ಪು ತಿದ್ದುಕೊಂಡಿದ್ದೇವೆ ಎಂದರು.

ಪಕ್ಷದ ಗೊಂದಲ ಆಡಳಿತ ಯಂತ್ರದ ಮೇಲೆ ಪರಿಣಾಮ ಬೀರುತ್ತದೆ. ಜನರಿಗೆ ಇದು ಮಾರಕ. ಮಂತ್ರಿಗಳು ಹಾಗೂ ಶಾಸಕರು ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಬಲಿಷ್ಠ ನಾಯಕ ಅಂದುಕೊಂಡಿದ್ದೆ. ಆದರೆ ಆಡಳಿತ ವಿಚಾರದಲ್ಲಿ ಬಹಳ ದುರ್ಬಲರಾಗಿದ್ದಾರೆ. ಬಿಜೆಪಿಗೆ ಯಾಕಾದರೂ ಅಧಿಕಾರ ಕೊಟ್ಟೆವು ಎಂದು ಜನರಿಗೆ ವೈರಾಗ್ಯ ಬಂದಿದೆ ಎಂದು ಹೇಳಿದರು.

ಸರಕಾರದ ದೌರ್ಬಲ್ಯ ಕುರಿತು ಸತ್ಯಾಂಶ ಒಪ್ಪಿಕೊಂಡ ಈಶ್ವರಪ್ಪ ಅವರಿಗೆ ಅಭಿನಂದನೆಗಳು. ಈ ಪರಿಸ್ಥಿತಿಯನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ. ಕಾಂಗ್ರೆಸ್ ಇದನ್ನು ಉಪಯೋಗಿಸಿಕೊಳ್ಳುತ್ತದೋ ಇಲ್ಲವೋ ಅದು ಬೇರೆ ವಿಚಾರ. ಮೊದಲು ಅವರ ಆಟ ಮುಗಿಯಲಿ. ಬಾಂಬೆ ಟೀಮ್ ನಿಂದ ಗೊಂದಲವಾಗುತ್ತಿದೆ ಎಂಬ ಈಶ್ವರಪ್ಪ ಅವರ ಈಗಿನ ಹೇಳಿಕೆ ಬಗ್ಗೆ ನಾನು ಈ ಹಿಂದೆಯೇ ವಿಧಾನಸಭೆಯಲ್ಲೇ ಭವಿಷ್ಯ ನುಡಿದಿದ್ದೆ. ಈಶ್ವರಪ್ಪ ಅವರ ಈ ಟೀಕೆಗೆ ಬಿ.ಸಿ. ಪಾಟೀಲ್ ಉತ್ತರ ಕೊಟ್ಟಿದ್ದಾರೆ' ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News