ಸಿಐಡಿ ತನಿಖೆಗೆ ಸಂಪೂರ್ಣ ಸಹಕಾರ, ನ್ಯಾಯ ಸಿಗದಿದ್ದರೆ ಹೋರಾಟ: ಕೊಡಗು ಕ್ರೈಸ್ತ ಸೇವಾ ಸಂಘ

Update: 2021-06-16 12:23 GMT

ಮಡಿಕೇರಿ, ಜೂ.16: ವಿರಾಜಪೇಟೆಯ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜ ಅವರ ಸಾವಿನ ಪ್ರಕರಣವನ್ನು ಕೊಡಗು ಜಿಲ್ಲಾ ಕ್ರೈಸ್ತ ಸೇವಾ ಸಂಘ, ಜಿಲ್ಲಾ ರೋಮನ್ ಕ್ಯಾಥೋಲಿಕ್ ಸಂಘ ಮತ್ತು ವಿವಿಧ ಕೈಸ್ತ ಸಂಘಟನೆಗಳು ಖಂಡಿಸಿವೆ, ಅಲ್ಲದೆ ವಿಷಾದ ವ್ಯಕ್ತಪಡಿಸಿವೆ.

ಪತ್ರಿಕಾ ಪ್ರಕಟಣೆ ನೀಡಿರುವ ಕ್ರೈಸ್ತ ಸೇವಾ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ಅವರು ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ವ್ಯವಸ್ಥೆ ಉತ್ತಮವಾಗಿದೆ. ಆದರೆ ಇತ್ತೀಚಿಗೆ ಮಾನಸಿಕ ಅಸ್ವಸ್ಥನ ಮೇಲೆ ಕೆಲವು ಪೊಲೀಸರು ದೌರ್ಜನ್ಯ ನಡೆಸಿರುವುದು ಖಂಡನಾರ್ಹವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಐಡಿ ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ, ಆದರೆ ಅಮಾಯಕ ರಾಯ್ ಸಾವಿಗೆ ಒಂದು ವೇಳೆ ನ್ಯಾಯ ಸಿಗದಿದ್ದಲ್ಲಿ ಲಾಕ್‍ಡೌನ್ ನಂತರ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಘಟನೆಯ ಸಿಸಿಟಿವಿ ದೃಶ್ಯಗಳು ಎಲ್ಲಾ ಕಡೆ ಹರಿದಾಡುತ್ತಿದ್ದು, ರಾಯ್ ಡಿಸೋಜ ಮಾನಸಿಕ ಅಸ್ವಸ್ಥ ಎನ್ನುವುದನ್ನು ಸಾಬೀತು ಮಾಡಿದೆ. ಜೂ.10ರಂದು ಸೂರ್ಯಗ್ರಹಣವಿದ್ದ ಕಾರಣ ಅದರ ಹಿಂದಿನ ದಿನದ ರಾತ್ರಿ ರಾಯ್ ಮಾನಸಿಕವಾಗಿ ಮತ್ತಷ್ಟು ಅಸ್ವಸ್ಥಗೊಂಡು ಯಾರಿಗೂ ತಿಳಿಯದ ಹಾಗೆ ಮನೆಯಿಂದ ಹೊರ ಹೋಗಿದ್ದಾರೆ. ನಂತರ ದಾರುಣ ಅಂತ್ಯ ಕಂಡಿದ್ದು, ಇದನ್ನು ಕುಟುಂಬ ವರ್ಗಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದಾರೆ. 

ಪೊಲೀಸ್ ಇಲಾಖೆಯ ಮೇಲೆ ನಮಗೆ ಅಪಾರ ಗೌರವವಿದೆ, ಆದರೆ ಕೆಲವರ ಅಮಾನವೀಯ ವರ್ತನೆಯಿಂದ ಇಡೀ ಪೊಲೀಸ್ ವ್ಯವಸ್ಥೆಗೆ ಕಳಂಕವಾಗಿದೆ. ಮಡಿಕೇರಿ ತಹಶೀಲ್ದಾರ್ ಮಹೇಶ್ ಅವರ ಉಪಸ್ಥಿತಿಯಲ್ಲಿ ರಾಯ್ ಡಿಸೋಜ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಾಗ ನಾನು, ರೋಮನ್ ಕ್ಯಾಥೋಲಿಕ್ ಸಂಘದ ಉಪಾಧ್ಯಕ್ಷ ಜಾನ್ಸನ್ ಪಿಂಟೋ ಹಾಗೂ ಗಿಲ್ಬರ್ಟ್ ಲೋಬೊ ಹಾಜರಿದ್ದು, ಗಮನಿಸಿದಾಗ ರಾಯ್ ಗೆ ಚಿತ್ರಹಿಂಸೆ ನೀಡಿರುವುದು ಸ್ಪಷ್ಟವಾಗಿದೆ ಎಂದು ಬೇಬಿಮ್ಯಾಥ್ಯು ಗಮನ ಸೆಳೆದಿದ್ದಾರೆ.

ಯಾವುದೇ ಒಬ್ಬ ಮನುಷ್ಯನಿಗೆ ಈ ರೀತಿಯ ಚಿತ್ರಹಿಂಸೆಯನ್ನು ರಕ್ಷಕರಾದ ಪೊಲೀಸರು ನೀಡಬಾರದು. ಉತ್ತಮ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾಗಳಿರುವ ಕೊಡಗು ಜಿಲ್ಲೆಯಲ್ಲಿ ಈ ರೀತಿಯ ಅಮಾನುಷ ಕೃತ್ಯ ನಡೆದಿರುವುದರಿಂದ ಇಡೀ ಇಲಾಖೆ ತಲೆ ತಗ್ಗಿಸುವಂತಾಗಿದೆ.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಎ.ಎಸ್.ಪೊನ್ನಣ್ಣ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ. ವಿವಿಧ ಸಂಘ, ಸಂಸ್ಥೆಗಳು ಮೃತ ರಾಯ್ ತಾಯಿ ಹಾಗೂ ಸಹೋದರನಿಗೆ ಸಾಂತ್ವನ ಹೇಳಿರುವುದಲ್ಲದೆ, ಪ್ರಕರಣದ ತನಿಖೆಗೆ ಒತ್ತಾಯಿಸಿದ್ದರು. ಮೈಸೂರು ಧರ್ಮ ಪ್ರಾಂತೀಯ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಸೇರಿದಂತೆ ವಿವಿಧ ಪ್ರಾಂತೀಯ ಧರ್ಮಗುರುಗಳು ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಪೊಲೀಸ್ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಉನ್ನತ ಮಟ್ಟದ ತನಿಖೆಗಾಗಿ ಒತ್ತಡ ಹೇರಿದ್ದರು. ಇದರ ಪರಿಣಾಮ ಇಂದು ಸಿಐಡಿ ತನಿಖೆ ಆರಂಭಗೊಂಡಿದೆ ಎಂದು ತಿಳಿಸಿದ್ದಾರೆ.  

ದಕ್ಷಿಣ ವಲಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಮಧುಕರ್ ಅವರು ವಿರಾಜಪೇಟೆಗೆ ಆಗಮಿಸಿ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದ್ದಾರೆ. ಇದೀಗ ನಾಲ್ವರು ಸಿಐಡಿ ಉನ್ನನಾಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಇದು ನಮ್ಮ ಹೋರಾಟಕ್ಕೆ ಸಿಕ್ಕಿದ ಮೊದಲ ಜಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಯ್ ಡಿಸೋಜ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿ ತಪ್ಪಿತಸ್ತರಿಗೆ ಶಿಕ್ಷಯಾಗಬೇಕೆಂದು ಬೆಂಬಲ ಸೂಚಿಸಿದ ಮಾಜಿ ಮುಖ್ಯಮಂತ್ರಿಗಳು, ಪಟ್ಟಣ ಪಂಚಾಯತ್, ಗ್ರಾ.ಪಂ ಸದಸ್ಯರುಗಳು, ಎಲ್ಲಾ ರಾಜಕೀಯ ಪಕ್ಷಗಳ ಪ್ರಮುಖರು, ಸಂಘ ಸಂಸ್ಥೆಗಳ ಮುಖಂಡರುಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬೇಬಿ ಮ್ಯಾಥ್ಯು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News