ಶಾಲಾ ಶುಲ್ಕ ಕಡಿತ ವಿವಾದ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆಗೆ ಮುಂದಾದ ರಾಜ್ಯ ಸರಕಾರ

Update: 2021-06-16 12:40 GMT

ಬೆಂಗಳೂರು, ಜೂ.16: ಶಾಲಾ ಶುಲ್ಕವನ್ನು ಶೇ.30ರಷ್ಟು ಕಡಿತ ಮಾಡಿರುವ ಸರಕಾರ ಹಾಗೂ ಖಾಸಗಿ ಶಾಲೆಗಳ ನಡುವೆ ಉಂಟಾಗಿರುವ ಶುಲ್ಕ ನಿಗದಿ ವಿವಾದವನ್ನು ಕೊನೆಗೊಳಿಸಲು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ಸಂಬಂಧ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಶಾಲಾ ಶುಲ್ಕ ಕಡಿತಗೊಳಿಸಿರುವ ಸರಕಾರದ ಆದೇಶ ಪ್ರಶ್ನಿಸಿ ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಪೀಠಕ್ಕೆ ಮಾಹಿತಿ ನೀಡಿ, ಪ್ರಸ್ತುತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರಿಗೆ ಪೂರ್ಣ ಶುಲ್ಕ ಪಾವತಿಸಲು ಸಮಸ್ಯೆಯಾಗುತ್ತಿದೆ. ಹೀಗಾಗಿ, ಶುಲ್ಕ ನಿಗದಿ ವಿವಾದವನ್ನು ಬಗೆಹರಿಸಲು ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಯೋಚಿಸಲಾಗಿದೆ. ಸಮಿತಿ ಸೂಚನೆಯಂತೆ ಶುಲ್ಕ ನಿಗದಿ ಪರಿಶೀಲನೆ ಮಾಡಲಾಗುವುದು ಎಂದು ಪೀಠಕ್ಕೆ ವಿವರಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News