ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ ಆರ್ಭಟ: ಅಲ್ಲಲ್ಲಿ ಭೂ ಕುಸಿತ, ವಿದ್ಯುತ್ ಸ್ಥಗಿತ

Update: 2021-06-16 16:20 GMT

ಚಿಕ್ಕಮಗಳೂರು, ಜೂ.16: ಕಾಫಿನಾಡಿನಲ್ಲಿ ಮುಂಗಾರು ಮಳೆಯ ಆರ್ಭಟ ಬುಧವಾರವೂ ಮುಂದುವರಿದಿದ್ದು, ಧಾರಾಕಾರ ಮಳೆ ಹಾಗೂ ಗಾಳಿಗೆ ಅಲ್ಲಲ್ಲಿ ಭೂಕುಸಿತ, ವಿದ್ಯುತ್ ಸ್ಥಗಿತ, ಹೊಲ ಗದ್ದೆಗಳಿಗೆ ನೀರು ನುಗ್ಗಿರುವ ಘಟನೆಗಳು ವರದಿಯಾಗಿವೆ.

ಜಿಲ್ಲೆಯಲ್ಲಿ ಕಳೆದೊಂದು ವಾರದ ಹಿಂದೆ ಮುಂಗಾರು ಮಳೆಯ ಪ್ರವೇಶವಾಗಿದ್ದು, 5 ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ, ಜಿಲ್ಲೆಯ ಬಯಲು ಭಾಗದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಮಲೆನಾಡಿನಲ್ಲಿ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಧಾರಾಕಾರ ಮಳೆಯಾಗಿದ್ದು, ಮಲೆನಾಡಿನ ಪ್ರಮುಖ ನದಿಗಳಾದ ಭದ್ರಾ, ಹೇಮಾವತಿ, ತುಂಗಾ ನದಿಗಳಲ್ಲಿ ನದಿ ನೀರಿನ ಹರಿವಿನಲ್ಲೂ ಹೆಚ್ಚಳವಾಗಿದೆ. 

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಬುಧವಾರ ಭಾರೀ ಮಳೆಯಾಗಿದ್ದು, ಈ ಪೈಕಿ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಾಳೂರು, ಬಣಕಲ್, ಗಬ್ಗಲ್, ಹಿರೇಬೈಲು, ಕಳಸ, ಹೊರನಾಡು, ಕುದುರೆಮುಖ, ಭೈರಾಪುರ, ಸುಂಕಸಾಲೆ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಈ ಭಾಗದಲ್ಲಿ ನೂರಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಮಲೆನಾಡಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಕಡಿತಗೊಂಡಿದೆ. 

ಮೂಡಿಗೆರೆ ತಾಲೂಕಿನ ಕನ್ನೇಹಳ್ಳಿ ಗ್ರಾಮದಲ್ಲಿ ಜಪಾವತಿ ನದಿ ತುಂಬಿ ಹರಿಯುತ್ತಿದ್ದು, ಬುಧವಾರ ಬೆಳಗ್ಗೆ ಈ ನದಿಯಲ್ಲಿ ಪಿಕ್‍ಅಪ್ ಒಂದು ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಕೊಗ್ರಳ್ಳಿ ರಿವರ್ ಕಂಟ್ರಿ ರೆಸಾರ್ಟ್‍ಗೆ ಸೇರಿದ ಪಿಕ್‍ಅಪ್ ಹಳ್ಳದ ಮೇಲಿದ್ದ ಸೇತುವೆ ದಾಟುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ಹಳ್ಳಕ್ಕೆ ಬಿದ್ದಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ.

ಇನ್ನು ಮೂಡಿಗೆರೆ ತಾಲೂಕಿನ ಬಿನ್ನಡಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಪರಿಣಾಮ ಕೆಲ ಹೊತ್ತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಸ್ಥಳೀಯರು ರಸ್ತೆಯಲ್ಲಿದ್ದ ಮಣ್ಣು ತೆರವು ಮಾಡಿದ್ದಾರೆಂದು ತಿಳಿದು ಬಂದಿದೆ. ಮೂಡಿಗೆರೆ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಹೇಮಾವತಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಕೆಲ ಹೊಲ ಗದ್ದೆಗಳಿಗೆ ನೀರು ನುಗ್ಗಿರುವ ಘಟನೆಗಳೂ ವರದಿಯಾಗಿವೆ. ಇನ್ನು ಬಣಕಲ್ ಹಾಗೂ ಕೊಟ್ಟಿಗೆಹಾರ ಸಂಪರ್ಕದ ಹೆದ್ದಾರಿಯಲ್ಲಿ ಹಳ್ಳವೊಂದರ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ತಾಲೂಕಿನಲ್ಲಿ ಧಾರಾಕಾರ ಮಳೆಯ ಪರಿಣಾಮ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಕಳಸ - ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಭದ್ರಾ ನದಿಯಲ್ಲಿ ಮುಳುಗಡೆಯಾಗಲು ಕೆಲವೇ ಅಡಿಗಳು ಬಾಕಿ ಇದೆ ಎಂದು ತಿಳಿದು ಬಂದಿದ್ದು, ಮಳೆ ಮುಂದುವರಿದಲ್ಲಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಕಳಸ ಹೊರನಾಡು ಸಂಪರ್ಕ ಕಡಿತಗೊಳ್ಳಲಿದೆ.

ಉಳಿದಂತೆ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲೂ ಬುಧವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ಹರಿಯುವ ತುಂಗಾ ನದಿಯಲ್ಲೂ ನೀರಿನ ಹರಿವು ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ತಾಲೂಕಿನ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾಗಿದ್ದರೆ, ಚಿಕ್ಕಮಗಳೂರು ಕಸಬಾ, ಅಂಬಳೆ, ಲಕ್ಯಾ ಹೋಬಳಿ ಭಾಗದಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಕಡೂರು, ತರೀಕೆರೆ ಭಾಗದ ಅಲ್ಲಲ್ಲಿ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News