ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ: ಮನೆ ನೆಲಸಮ, ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

Update: 2021-06-16 16:48 GMT

ಮಡಿಕೇರಿ, ಜೂ.16: ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ನದಿ, ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಕಳೆದ ಐದು ದಿನಗಳಿಂದ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದೆ. 

ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು, ವಿರಾಜಪೇಟೆ ಭಾಗದಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದೆ, ಮೈಕೊರೆಯುವ ಚಳಿಯೂ ಇದೆ. ವಿರಾಜಪೇಟೆಯ ಕೆದಮಳ್ಳೂರು ತೋರ ಗ್ರಾಮದಲ್ಲಿ ಗಾಳಿ, ಮಳೆಗೆ ಪಿ.ಟಿ.ಪಾರ್ವತಿ ಎಂಬವರ ಮನೆ ನೆಲಸಮವಾಗಿದೆ. ಕಳೆದ ಒಂದು ತಿಂಗಳಿನಿಂದ ಇವರು ತಮ್ಮ ಪುತ್ರಿಯ ಮನೆಯಲ್ಲಿ ಸುರಕ್ಷಿತವಾಗಿದ್ದರು.

ಮಡಿಕೇರಿ ನಗರದ ವಿವಿಧೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಮತ್ತು ಜನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹಳೆಯ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಕೆಸರುಮಯ ನೀರು ರಸ್ತೆಯಲ್ಲಿ ತುಂಬಿ ಹರಿದು ಸಂಚಾರ ವ್ಯತ್ಯಯಗೊಂಡಿತು. ಭಾಗಮಂಡಲದ ತ್ರಿವೇಣಿ ಸಂಗಮ ಸೇರಿದಂತೆ ಕಾವೇರಿ ಹರಿಯುವ ಪ್ರದೇಶದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.

ಜಿಲ್ಲಾಧಿಕಾರಿ ಭೇಟಿ
ಮಡಿಕೇರಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಸಂಭವಿಸಬಹುದಾದ ಬರೆ ಕುಸಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಎರಡನೇ ಮೊಣ್ಣಂಗೇರಿ, ಗಾಳಿಬೀಡು, ಕಾಲೂರು, ನಿಡವಟ್ಟು, ಮೇಘತ್ತಾಳು, ಆವಂಡಿ, ಮಕ್ಕಂದೂರು, ಹೆಮ್ಮೆತ್ತಾಳು ಮತ್ತು ಉದಯಗಿರಿ ಮತ್ತಿತರ ಬರೆ ಕುಸಿತ ಹಾಗೂ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಈಗಾಗಲೇ ಮುಂಗಾರು ಆರಂಭವಾಗಿರುವುದರಿಂದ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಕೈಗೊಳ್ಳಲಾಗಿರುವ ಸಿದ್ಧತೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 

ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ತಹಶೀಲ್ದಾರ್ ಮಹೇಶ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಹಾಜರಿದ್ದರು. 

ಮಳೆ ವಿವರ
ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 55.27 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 78.87 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 54.52 ಮಿ.ಮೀ. ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 32.43 ಮಿ.ಮೀ. ಮಳೆಯಾಗಿದೆ.   

ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2829.35 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 10.8. ಇಂದಿನ ನೀರಿನ ಒಳಹರಿವು 992 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 40 ಕ್ಯುಸೆಕ್. ನಾಲೆಗೆ 40 ಕ್ಯುಸೆಕ್. ಇಂದಿನ ನೀರಿನ ಹೊರ ಹರಿವು 80 ಕ್ಯುಸೆಕ್. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News