ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳಿಗೆ ತೆರೆ ಎಳೆಯಲು ಅರುಣ್ ಸಿಂಗ್ ಯತ್ನ: ಗುರುವಾರ ಶಾಸಕರ ಜೊತೆ ಪ್ರತ್ಯೇಕ ಸಭೆ

Update: 2021-06-16 16:51 GMT

ಬೆಂಗಳೂರು, ಜೂ.16: ರಾಜ್ಯ ಬಿಜೆಪಿಯಲ್ಲಿನ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಮೂರು ದಿನಗಳ ಭೇಟಿಗಾಗಿ ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರ ಜೊತೆ ಸುದೀರ್ಘವಾಗಿ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ.

ರಾಜ್ಯ ಸರಕಾರದಲ್ಲಿ ಮೂಡುತ್ತಿರುವ ಗೊಂದಲಗಳು ಹಾಗೂ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಎಲ್ಲ ಸಚಿವರಿಂದ ಮಾಹಿತಿಯನ್ನು ಸಂಗ್ರಹಿಸಿರುವ ಅರುಣ್ ಸಿಂಗ್, ಸಚಿವರು ತಮ್ಮ ತಮ್ಮ ಇಲಾಖೆಗಳಲ್ಲಿ ಯಾವ ರೀತಿಯಲ್ಲಿ ಸಾಧನೆಗಳನ್ನು ಮಾಡಿದ್ದಾರೆ ಎಂಬುದರ ಬಗ್ಗೆಯೂ ವಿವರಣೆಯನ್ನು ಪಡೆದುಕೊಂಡರು.

ಇದೇ ವೇಳೆ ರಾಜ್ಯದಲ್ಲಿ ನಾಯಕತ್ವದ ವಿರುದ್ಧ ಪದೇ ಪದೇ ಕೇಳಿಬರುತ್ತಿರುವ ಅಪಸ್ವರಗಳಿಗೆ ಕಡಿವಾಣ ಹಾಕಬೇಕು. ಶಾಸಕರು ಬಣಗಳಾಗಿ ಶಕ್ತಿ ಪ್ರದರ್ಶನ ಮಾಡಬಾರದು ಎಂದು ಅರುಣ್ ಸಿಂಗ್ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ. ನಾಳೆ ಇಡೀ ದಿನ ಶಾಸಕರಿಗಾಗಿ ಸಮಯ ಮೀಸಲಿರಿಸಿರುವ ಅವರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಸಂಸದರು ಸೇರಿದಂತೆ ಯಾರು ಬೇಕಾದರೂ ಪ್ರತ್ಯೇಕವಾಗಿ ಬಂದು ತಮ್ಮನ್ನು ಭೇಟಿ ಮಾಡಿ ಚರ್ಚಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಆಡಳಿತದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪ, ಶಾಸಕರು ಹಾಗೂ ಸಚಿವರ ನಡುವಿನ ಸಮನ್ವಯತೆಯ ಕೊರತೆ, ಮೂಲ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಲ್ಲಿ ತಾರತಮ್ಯ ಆಗುತ್ತಿದೆ ಎಂಬುದು ಯಡಿಯೂರಪ್ಪ ವಿರೋಧಿ ಗುಂಪಿನ ಪ್ರಮುಖ ಆರೋಪಗಳಾಗಿವೆ.

ರಾಜ್ಯದಲ್ಲಿ ಸತತ ಎರಡು ವರ್ಷಗಳ ಪ್ರವಾಹ, ಕೋವಿಡ್ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿರ್ವಹಿಸಿದ್ದಾರೆ. ಅವರ ನಾಯಕತ್ವ ಬದಲಾವಣೆ ಮಾಡಿದಲ್ಲಿ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳಬಹುದು. ಆದುದರಿಂದ, ಮುಂದಿನ ಎರಡು ವರ್ಷಗಳ ಕಾಲ ಅವರ ಆಡಳಿತಕ್ಕೆ ಯಾವುದೆ ರೀತಿ ಅಡ್ಡಿಪಡಿಸಬಾರದು ಎಂದು ಯಡಿಯೂರಪ್ಪ ಪರವಾಗಿರುವ ಶಾಸಕರ ವಾದವಾಗಿದೆ.

ಆದುದರಿಂದ, ಯಡಿಯೂರಪ್ಪ ಪರ ಹಾಗೂ ವಿರೋಧಿ ಗುಂಪಿನ ಎಲ್ಲ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಅವರ ಅಭಿಪ್ರಾಯಗಳನ್ನು ಕ್ರೋಢಿಕರಿಸಿ, ಬಿಜೆಪಿ ಹೈಕಮಾಂಡ್ ಗಮನಕ್ಕೆ ತರಲು ಅರುಣ್ ಸಿಂಗ್ ನಿರ್ಧರಿಸಿದ್ದಾರೆ. ಶಾಸಕರ ಸಭೆಯ ಬಳಿಕ ಅವರು ಶುಕ್ರವಾರ ಬಿಜೆಪಿ ರಾಜ್ಯ ಪದಾಧಿಕಾರಿಗಳೊಂದಿಗೆ ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳ ಸಿದ್ಧತೆ ಕುರಿತು ಚರ್ಚೆ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News