ಕಲಬುರಗಿ: ಆಸ್ಪತ್ರೆಯಲ್ಲಿ ಅತ್ಯಾಚಾರ ಯತ್ನಕ್ಕೆ ಒಳಗಾಗಿದ್ದ ಕೋವಿಡ್ ಸೋಂಕಿತ ಮಹಿಳೆ ಮೃತ್ಯು

Update: 2021-06-16 17:44 GMT
ಸಾಂದರ್ಭಿಕ ಚಿತ್ರ

ಕಲಬುರಗಿ, ಜೂ.16: ಕಳೆದ ವಾರ ಅತ್ಯಾಚಾರಕ್ಕೆ ಯತ್ನಕ್ಕೆ ಒಳಗಾಗಿದ್ದ ಕೋವಿಡ್ ಪೀಡಿತ ಮಹಿಳೆಯ ಇಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ.

ಕಾಳಗಿ ಮೂಲದ 25 ವರ್ಷದ ಮಹಿಳೆ ಹದಿನೈದು ದಿನಗಳ ಹಿಂದೆ ನಗರದ ಜಿಮ್ಸ್ ಆಸ್ಪತ್ರೆಗೆ ಕೋವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಜೂ.7ರಂದು ರಾತ್ರಿ ವೇಳೆ ಮಹಿಳೆಯ ಮೇಲೆ ಆ್ಯಂಬುಲೆನ್ಸ್ ಚಾಲಕ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು. ಘಟನೆ ಬಳಿಕ ಆ್ಯಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದರು. ಆದರೆ ಇಂದು ಮಹಿಳೆ ತೀವ್ರ ಉಸಿರಾಟ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಅಖಿಲ ಭಾರತೀಯ ಜನವಾದಿ ಮಹಿಳಾ ಸಂಘಟನೆಯ ಕೆ ನೀಲಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅತ್ಯಾಚಾರ ಯತ್ನಕ್ಕೊಳಗಾದ ಮಹಿಳಾ ರೋಗಿ‌ಯು ಸಾವಿಗೀಡಾಗಿದ್ದು, ಜಿಮ್ಸ್ ನಲ್ಲಿ ಭದ್ರತೆಯ ಲೋಪ ಗಂಭೀರವಾಗಿರುವುದನ್ನು ಈ ಪ್ರಕರಣದಿಂದ ದೃಢಪಟ್ಟಿದೆ ಎಂದು ಆರೋಪಿಸಿದ್ದಾರೆ.

ಕೊರೋನ ಚಿಕಿತ್ಸೆ ಫಲಕಾರಿಯಾಗದೆ ರೋಗಿಯು ಸಾವನ್ನಪ್ಪಿರುವಳೇ ಅಥವ ಇನ್ನೇನು ಕಾರಣ ಎಂಬುದನ್ನು ಜಿಮ್ಸ್ ಆಡಳಿತ ಮಂಡಳಿಯು ಜನತೆಯ ಮುಂದೆ ಸ್ಪಷ್ಟಪಡಿಸಬೇಕು. ಸರಕಾರವು ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.  

'ಈ ಪ್ರಕರಣ ಅತ್ಯಂತ ಅಮಾನವೀಯವಾಗಿದೆ. ಇಷ್ಟೆಲ್ಲ ನಡೆದ ಮೇಲೆಯೂ ಜಿಲ್ಲಾ ಆಡಳಿತವೂ ಮೌನ ವಹಿಸಿದೆ ಏಕೆ? ಈ ನಿರ್ಲಕ್ಷ್ಯವು ಹೀಗೆ ಮುಂದುವರಿದಲ್ಲಿ ಹೋರಾಟ ಮಾಡಲಾಗುವುದು' ಎಂದು ಸಮಿತಿಯ ಅಮೀನಾ ಬೇಗಂ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News