ಯುವ ಕಾಂಗ್ರೆಸ್ ಮುಖಂಡರ ನಡುವೆ ನಡು ರಸ್ತೆಯಲ್ಲಿ ಮಾರಾಮರಿ

Update: 2021-06-16 18:01 GMT

ಚಿಕ್ಕಮಗಳೂರು, ಜೂ.16: ನಗರದ ನಡು ರಸ್ತೆಯಲ್ಲೇ ಯುವ ಕಾಂಗ್ರೆಸ್ಸಿಗರ ನಡುವೆ ಮಾರಾಮಾರಿ ನಡೆದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆಯಿತು.

ಕಡೂರು-ಮಂಗಳೂರು ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು. ಸಭೆ ಮುಗಿದು ಕಚೇರಿಯಿಂದ ಹೊರಬಂದ ಮೇಲೆ ಮುಖಂಡರ ನಡುವೆ ಮುಖ್ಯ ರಸ್ತೆಯಲ್ಲೆ ಹೊಡೆದಾಟವಾಯಿತು. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಯಲ್‍ ಶರೀಫ್ ಸೇರಿದಂತೆ ಅವರ ಕಡೆಯವರು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ ಜತೆಗೆ ಬಂದಿದ್ದ ದರ್ಶನ್ ಎಂಬವರಿಗೆ ಥಳಿಸಿದ್ದಾರೆಂದು ಹೇಳಲಾಗಿದೆ.

ತರೀಕೆರೆ ತಾಲೂಕಿನ ಐಟಿಸೆಲ್ ಅಧ್ಯಕ್ಷ ದರ್ಶನ್ ವಾಟ್ಸ್ ಆಪ್ ಗ್ರೂಪ್ ತೆರೆದಿದ್ದು, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಯಲ್‍ ಶರೀಫ್ ಆ ಗ್ರೂಪ್‍ಗೆ ಸೇರ್ಪಡೆಗೊಂಡಿದ್ದರು. ಪಕ್ಷದ ವಿಚಾರವನ್ನು ಚರ್ಚಿಸಲಾಗುತಿತ್ತು. ಇತ್ತೀಚೆಗೆ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಪ್ರತೀ ಜಿಲ್ಲೆಗೆ ಉಚಿತ ಆ್ಯಂಬುಲೆನ್ಸ್ ನೀಡಲಾಗಿತ್ತು. ಆ ವಾಹನವನ್ನು ತರೀಕೆರೆಗೆ ನೀಡಲಾಗಿತ್ತು. ಈ ವಿಷಯವನ್ನು ವಾಟ್ಸ್ ಆಪ್ ನನಲ್ಲಿ ಹಾಕಿದ್ದು, ಅದಕ್ಕೆ ಸಂಬಂಧಿಸಿದಂತೆ ರಾಯಲ್ ಶರೀಫ್ ಟ್ವೀಟ್ ಮಾಡಿದ್ದು, ಅವರನ್ನು ಆ ವಾಟ್ಸ್ ಆಪ್ ಗುಂಪಿನಿಂದ ದರ್ಶನ್ ತೆಗೆದುಹಾಕಿದ್ದರು.

ಆ ವಿಷಯವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರ ಕಡೆಯವರು ದರ್ಶನ್‍ಗೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ ಸಮ್ಮುಖದಲ್ಲೆ ಥಳಿಸಿದ್ದು, ಈ ಕುರಿತು ಥಳಿತಕ್ಕೊಳಗಾದ ದರ್ಶನ್‍ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಗರ ಠಾಣೆಯಲ್ಲಿ ದೂರು ನೀಡಲು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂತೋಷ್ ಮುಂದಾದರೆಂದು ಹೇಳಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ಗುಂಪುಗಳನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದ್ದು, ಎರಡು ಗುಂಪುಗಳು ಅಲ್ಲಿಂದ ತೆರಳಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News