ನ್ಯಾಯಾಧೀಶರ ಮೂಲಕ ಕೋವಿಡ್ ಸಾವುಗಳ ಆಡಿಟ್ ಆಗಬೇಕು: ಎಚ್.ಕೆ.ಪಾಟೀಲ್

Update: 2021-06-16 18:23 GMT

ಬೆಂಗಳೂರು, ಜೂ.16: ಕೋವಿಡ್ ಸಾವುಗಳ ಬಗ್ಗೆ ಹಾಲಿ ನ್ಯಾಯಾಧೀಶರಿಂದ ಡೆತ್ ಆಡಿಟ್ ನಡೆಸಬೇಕು. ಇದೊಂದು ಜನ ವಿರೋಧಿ ಸರಕಾರವಾಗಿದ್ದು, ಜನರ ಎದುರು ಸುಳ್ಳಿನ ಗೋಪುರ ಕಟ್ಟುತ್ತಿದೆ. ರಾಜ್ಯದಲ್ಲಿ ಕೋವಿಡ್‍ನಿಂದ 33,033 ಜನ ಮೃತಪಟ್ಟಿರುವುದಾಗಿ ಪ್ರಕಟಿಸಿದ್ದಾರೆ. ಮೊದಲ ಅಲೆಯಲ್ಲೆ 23 ಸಾವಿರ ಸಾವುಗಳು ಸಂಭವಿಸಿದ್ದವು. ರಾಜ್ಯದಲ್ಲಿ 3,27,985 ಸಾವುಗಳು ಸಂಭವಿಸಿವೆ. ಇವೆಲ್ಲ ಸಾಮಾನ್ಯ ಸಾವುಗಳೇ? ಸುಮಾರು 2.50 ಲಕ್ಷ ಸಾವುಗಳ ವಿವರವನ್ನು ಸರಕಾರ ಮುಚ್ಚಿಟ್ಟಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ದೂರಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನದಿಂದ ಜನ ತತ್ತರಿಸಿ ಹೋಗಿದ್ದಾರೆ. ಕುಟುಂಬದವರು ತಮ್ಮವರನ್ನು ಕಳೆದುಕೊಂಡಿದ್ದಾರೆ. ಅವರಿಗೆ ಯಾವ ರೀತಿಯ ನೆರವು ನೀಡುತ್ತೀರಾ? ಎಂದು ಸರಕಾರವನ್ನು ಪ್ರಶ್ನಿಸಿದರು.

ಕೇಂದ್ರದಲ್ಲಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದರು. ರಾಷ್ಟ್ರೀಯ ವಿಪತ್ತಿನಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡುವ ಅಂಶವನ್ನು ಅದರಲ್ಲಿ ಸೇರಿಸಲಾಗಿತ್ತು. ಕೋವಿಡ್ ಮೊದಲ ಅಲೆ ಬಂದಾಗ ನಾವು ಕೊರೋನವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಸರಕಾರಕ್ಕೆ ಒತ್ತಾಯ ಮಾಡಿದ್ವಿ ಎಂದು ಅವರು ಹೇಳಿದರು.

ಕೋವಿಡ್‍ನಿಂದ ಮೃತಪಟ್ಟವರಿಗೆ 5 ರಿಂದ 6 ಲಕ್ಷ ರೂ.ಪರಿಹಾರ ನೀಡಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ, ನೀವು 4 ಲಕ್ಷ ಕೊಡಲು ಸಿದ್ಧವಾಗಿದ್ರಿ. ಈಗ ನೋಡಿದರೆ ಕೇವಲ ಒಂದು ಲಕ್ಷ ರೂ. ಮಾತ್ರ ಕೊಡುವುದಾಗಿ ಘೋಷಣೆ ಮಾಡಿದ್ದೀರಾ. ಕೋವಿಡ್ ನಿಂದ ಮೃತ ಪಟ್ಟವರಿಗೆ ವಂಚನೆ ಮಾಡುವ ಕೆಲಸ ಸರಕಾರ ಮಾಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟರೆ ನಾಲ್ಕು ಲಕ್ಷ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕು. ಆದರೆ, ಕೋವಿಡ್‍ನಿಂದ ಮೃತಪಟ್ಟಿದ್ದರೂ ಬೇರೆ ತಾಂತ್ರಿಕ ಕಾರಣಗಳನ್ನು ನೀಡಿ ಅಂತಹವರ ಕುಟುಂಬಗಳಿಗೆ ಪರಿಹಾರ ಸಿಗದಂತೆ ವಂಚನೆ ಮಾಡಬಾರದು. ಇಂತಹ ಪ್ರಕರಣಗಳು ಕಂಡು ಬಂದರೆ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್.ಕೆ.ಪಾಟೀಲ್ ಎಚ್ಚರಿಕೆ ನೀಡಿದರು.

ಮೂರನೆ ಅಲೆಯ ಬಗ್ಗೆ ಬಹಳ ಎಚ್ಚರಕೆಯಿಂದ ಇರಬೇಕು. ಕಾರ್ಯಪಡೆಗಳನ್ನು ರಚನೆ ಮಾಡಬೇಕು. ಜೊತೆಯಲ್ಲಿ ವಾರ್ಡ್ ಮಟ್ಟದಲ್ಲಿ ಶಿಶುಪಾಲನ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು. ಶೇ.8ರಷ್ಟು ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದೆ. ಸುಮಾರು 2000 ಮಕ್ಕಳು ಸಾವನ್ನಪ್ಪಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ಆರಂಭ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠೀಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ  ಸಹ ಅಧ್ಯಕ್ಷ ವಿ.ಆರ್.ಸುದರ್ಶನ್ ಹಾಗೂ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಂಯೋಜಕರಾದ ಎಂ.ರಾಮಚಂದ್ರಪ್ಪ, ಎಂ.ಎ.ಸಲೀಂ ಉಪಸ್ಥಿತರಿದ್ದರು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News