ದ್ವಿತೀಯ ಪಿಯು ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

Update: 2021-06-17 11:14 GMT

ಬೆಂಗಳೂರು, ಜೂ.17: ಪುನರಾವರ್ತಿತ(ರಿಪೀಟರ್) ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಕುರಿತು ಸೂಕ್ತ ನಿರ್ಣಯ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸದಂತೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.

2020-21ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಪಾಸು ಮಾಡುವ ಸರಕಾರದ ಆದೇಶ ಪ್ರಶ್ನಿಸಿ ನಗರದ ಜ್ಞಾನಮಂದಿರ ಎಜುಕೇಷನ್ ಟ್ರಸ್ಟ್ ನ ಎಸ್.ವಿ.ಸಿಂಗೇಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಪದವಿ ಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸಿದ್ದಪಡಿಸಿದ್ದ ಮೊಮೋ ಅನ್ನು ಸರಕಾರದ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು. ಪ್ರಸಕ್ತ ಸಾಲಿನ 5.92 ಲಕ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳು ಹಾಗೂ 76 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ವಿಚಾರವಾಗಿ ಸೂಕ್ತ ತೀರ್ಮಾನ ಕೈಗೊಳ್ಳುವ ಬಗ್ಗೆ 12 ಮಂದಿ ತಜ್ಞರ ಸಮಿತಿ ರಚಿಸಲಾಗಿದೆ. ತಜ್ಞರ ಸಮಿತಿ 15 ದಿನಗಳಲ್ಲಿ ವರದಿ ನೀಡಲಿದ್ದು, ಆ ವರದಿ ಆಧರಿಸಿ ರಾಜ್ಯ ಸರಕಾರ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸು ಮಾಡುವ ಕುರಿತು ತೀರ್ಮಾನಿಸಲಾಗುವುದು ಎಂದು ಪೀಠಕ್ಕೆ ವಿವರಿಸಿದರು.

ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಸಾಮಾನ್ಯ ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ(ರಿಪೀಟರ್) ವಿದ್ಯಾರ್ಥಿಗಳ ಮಧ್ಯೆ ತಾರತಮ್ಯ ಮಾಡುವುದು ಬೇಡ. ಎಲ್ಲರಿಗೂ ಒಂದೇ ರೀತಿಯ ನಿರ್ಣಯ ಕೈಗೊಳ್ಳುವುದು ಸೂಕ್ತ. ಹೀಗಾಗಿ ತಜ್ಞರ ಸಮಿತಿ ವರದಿ ಆಧರಿಸಿ ಸರಕಾರ ಸಮಗ್ರವಾಗಿ ನಿರ್ಣಯ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಫಲಿತಾಂಶವನ್ನು ಪ್ರಕಟಿಸಬಾರದು ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿತು.

ಹಿಂದಿನ ವಿಚಾರಣೆ ವೇಳೆ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳನ್ನಷ್ಟೇ ಪ್ರಥಮ ಪಿಯು ಅಂಕಗಳನ್ನು ಪರಿಗಣಿಸಿ ಪಾಸು ಮಾಡಲು ನಿರ್ಧರಿಸಿದ್ದ ಸರಕಾರದ ಆದೇಶದ ವಿರುದ್ಧ ಪೀಠ ಅಸಮಾಧಾನ ವ್ಯಕ್ತಪಡಿಸಿತ್ತು. ಪ್ರಥಮ ಪಿಯು ಅಂಕಗಳನ್ನು ಆಧರಿಸಿ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳನ್ನು ಪಾಸು ಮಾಡುವುದಾದರೆ ಪುನರಾವರ್ತಿತ(ರಿಪೀಟರ್) ವಿದ್ಯಾರ್ಥಿಗಳನ್ನೂ ಪಾಸು ಮಾಡಬಹುದಲ್ಲವೇ ಎಂದು ಪ್ರಶ್ನಿಸಿದ್ದ ಪೀಠ, ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸುವುದೇಕೆ. ಅವರಿಗೆ ಕೊರೋನದಿಂದ ತೊಂದರೆಯಾಗುವುದಿಲ್ಲವೇ. ಹೀಗಾಗಿ ಸರಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕೆಂದು ನಿರ್ದೇಶಿಸಿತ್ತು.

ಅರ್ಜಿದಾರರ ಮನವಿ ಏನು: 2020-21ನೆ ಶೈಕ್ಷಣಿಕ ವರ್ಷದಲ್ಲಿ ಸುಮಾರು 7 ಲಕ್ಷ ದ್ವಿತೀಯ ಪಿಯು ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಆದರೆ, ಕೊರೋನ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸದೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸು ಮಾಡಲು ಸರಕಾರ ನಿರ್ಧರಿಸಿದೆ. ಪ್ರಥಮ ಪಿಯು ಪರೀಕ್ಷೆ ಅಂಕ ಪರಿಗಣಿಸಿ ಉತ್ತೀರ್ಣ ಮಾಡುವ ಸಂಬಂಧ ಜೂನ್ 3ರಂದು ರಾಜ್ಯ ಸರಕಾರ ನೋಟಿಫಿಕೇಷನ್ ಹೊರಡಿಸಿದೆ. ಆದರೆ, ಪುನರಾವರ್ತಿತ ಮತ್ತು ಖಾಸಗಿ ಅಭ್ಯರ್ಥಿಗಳಿಗೆ ಈ ಅನುಕೂಲ ಕಲ್ಪಿಸಿಲ್ಲ. ಇದು ತಾರತಮ್ಯ ನೀತಿಯಾಗಿದೆ. ರಾಜ್ಯದಲ್ಲಿ ಸುಮಾರು 95 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಅವರನ್ನೂ ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡಬೇಕು. ಇಲ್ಲದಿದ್ದರೆ ಸರಕಾರದ ನೋಟಿಫಿಕೇಷನ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News