ಡಾ.ಸಿದ್ದಲಿಂಗಯ್ಯರಿಗೆ ಮರಣೋತ್ತರ ರಾಷ್ಟ್ರಕವಿ ಬಿರುದು ನೀಡಲು ಆಗ್ರಹ

Update: 2021-06-17 16:03 GMT

ಬೆಂಗಳೂರು, ಜೂ. 17: `ಖ್ಯಾತ ಕವಿ, ನಾಡೋಜ ಡಾ.ಸಿದ್ದಲಿಂಗಯ್ಯ ಅವರ ಹೆಸರು ಶಾಶ್ವತವಾಗಿ ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅವರಿಗೆ ಮರಣೋತ್ತರ ರಾಷ್ಟ್ರಕವಿ ಬಿರುದು ನೀಡಬೇಕು. ಒಂದು ವಿಶ್ವ ವಿದ್ಯಾಲಯಕ್ಕೆ ಅವರ ಹೆಸರನ್ನು ಇಡಬೇಕು ಹಾಗೂ ಅವರ ಸಾಹಿತ್ಯ ಜನರಿಗೆ ತಲುಪುವ ವ್ಯವಸ್ಥೆ ಮಾಡಬೇಕು' ಎಂದು ಭೀಮಪುತ್ರಿ ಬ್ರಿಗೇಡ್ ಅಧ್ಯಕ್ಷೆ ರೇವತಿ ರಾಜ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಗುರುವಾರ ಭೀಮ ಪುತ್ರಿ ಬ್ರಿಗೇಡ್ ಕೇಂದ್ರ ಕಚೇರಿಯಲ್ಲಿ `ಮೂಲನಿವಾಸಿ ಮಹಾ ಒಕ್ಕೂಟ'ದ ವತಿಯಿಂದ ಏರ್ಪಡಿಸಿದ್ದ ಕವಿ, ಸಾಹಿತಿ ಡಾ.ಸಿದಲಿಂಗಯ್ಯ ಅವರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಡಾ.ಸಿದ್ದಲಿಂಗಯ್ಯ ನಮ್ಮೆಲ್ಲರ ನೆನಪಿನಲ್ಲಿ ಇರಲಿದ್ದಾರೆ. ಅವರ ಹೋರಾಟದ ಗೀತೆಗಳು ಸದಾ ಅವರನ್ನು ಜೀವಂತವಾಗಿ ಇಟ್ಟಿರುತ್ತವೆ. ಅವರು ಹಾಕಿದ ಮಾರ್ಗದಲ್ಲಿ ದಲಿತ, ಶೋಷಿತರ ಚಳವಳಿ ಸಾಗಬೇಕು' ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ಜಿಗಣಿ ಶಂಕರ್ ಮಾತನಾಡಿ, `ನಾನು ಸಿದ್ದಲಿಂಗಯ್ಯವರನ್ನು ಅತ್ಯಂತ ಸಮೀಪದಿಂದಲೇ ಬಲ್ಲೆ. ಅವರ ಮತ್ತು ನಾವೆಲ್ಲರೂ ಒಟ್ಟಿಗೆ ಚಳುವಳಿ ರೂಪಿಸುತ್ತಿದ್ದ ವೇಳೆ ಅವರು ನನ್ನೊಂದಿಗೆ ಸಂವಾದಿಸಿ ಎಂದು ಆಗಾಗ ಹೇಳುತ್ತಲೇ ಇದ್ದರು. ಹೋರಾಟದ ಮೂಲಕ ಅಧಿಕಾರಕ್ಕೇರಬೇಕು. ಅಲ್ಲಿ ಶೋಷಿತರ ಧ್ವನಿಯಾಗಬೇಕೆಂಬ ಆಶಯದಿಂದಲೇ ಅವರು ಕಾವ್ಯದ ಮೂಲಕ ಮೇಲ್ಮನೆ ಸದಸ್ಯರಾಗಿ ಬಡವರ ಪರ ಶ್ರಮಿಸಿದ್ದರು' ಎಂದು ಸ್ಮರಿಸಿದರು.

ರಂಗತಜ್ಞ ಡಾ.ಗೋವಿಂದಸ್ವಾಮಿ ಮಾತನಾಡಿ, ಬಡತನದ ಹಿನ್ನೆಲೆಯಿಂದ ಬಂದ ಸಿದ್ದಲಿಂಗಯ್ಯ ಅವರು ಶ್ರೀರಾಮಪುರದ ಸ್ಮಶಾನದಲ್ಲಿ ಕುಳಿತು ಧ್ವನಿ ಇಲ್ಲದ ಸಮುದಾಯಗಳ ಕುರಿತು ಕಾವ್ಯ ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ಕೊಟ್ಟರು. ಅವರ ಇಕ್ರಲಾ ವದೀರ್ಲಾ.. ಕಾವ್ಯದ ಮೂಲಕ ಶೋಷಿತರಿಗೆ ಪ್ರತಿರೋಧಕ್ಕೆ ಎಂದು ಕರೆ ಕೊಟ್ಟಿದ್ದರು. ರಾಜ್ಯ ಸರಕಾರ ಅವರ ಹೆಸರಿನಲ್ಲಿ ಸಂಶೋಧನೆ, ಉನ್ನತ ವ್ಯಾಸಂಗಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಕವಿ ಸಿದ್ದಲಿಂಗಯ್ಯನವರ ಹೋರಾಟ ಗೀತೆಗಳನ್ನು ಹಾಡಲಾಯಿತು. ಮುಖಂಡರಾದ ಹೆಬ್ಬಾಳ ವೆಂಕಟೇಶ್, ಮುನಿ ಆಂಜನಪ್ಪ, ದಿವಿಲ್ ಕುಮಾರ್, ಲೋಕೇಶ್ಚಂದ್ರ, ರಾಜೇಶ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News