ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಮಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ನಾಚಿಕೆಗೇಡಿನ ಸಂಗತಿ: ಈಶ್ವರ್ ಖಂಡ್ರೆ

Update: 2021-06-17 12:37 GMT

ಬೆಂಗಳೂರು, ಜೂ.17: 'ಕೊರೋನ, ಬ್ಲ್ಯಾಕ್ ಫಂಗಸ್ ಭೀತಿ ನಡುವೆ ಆದಾಯ ಇಲ್ಲದೆ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದು, ಈ ಸಮಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.

ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಬಿಜೆಪಿ ನಾಯಕತ್ವ ಬದಲಾವಣೆ ನಾಟಕ ಮಾಡುತ್ತಿದ್ದು, ಇವರಿಗೆ ಸ್ವಲ್ಪವೂ ಮಾನವೀಯತೆ ಇಲ್ಲವಾಗಿದೆ. ತಮ್ಮ ವೈಫಲ್ಯ ಮರೆಮಾಚಲು ಈ ನಾಟಕ ಮಾಡುತ್ತಿದ್ದು, ಇದು ಲಜ್ಜೆ ಗೆಟ್ಟ ಸರಕಾರ ಎಂದು ಹರಿಹಾಯ್ದರು.

'ಬಿಜೆಪಿ ಅವರು ರೈತರಿಗೆ ಮರಣ ಶಾಸನ ಕಾನೂನು ತರುತ್ತಿದ್ದಾರೆ. ಕೊರೋನ ಹಾಗೂ ಸರಕಾರದ ಮೋಸದಿಂದ ಜನ ರೋಸಿಹೋಗಿದ್ದಾರೆ. 15 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ರೈತರು ಫಸಲ್ ಭಿಮಾ ಕಂತು ಕಟ್ಟಿದ್ದರೂ ವಿಮೆ ಹಣ ಸಿಕ್ಕಿಲ್ಲ. ಖಾಸಗಿ ಕಂಪನಿಗಳಿಗೆ ಲಾಭ ಮಾಡಲು ಈ ರೀತಿ ಮಾಡಲಾಗುತ್ತಿದೆ' ಎಂದು ಈಶ್ವರ್ ಖಂಡ್ರೆ ಟೀಕಿಸಿದರು.

'ಸರಕಾರ ಕೂಡಲೇ ಮುಂಗಾರು, ಹಿಂಗಾರು ಹಂಗಾಮಿನ ವಿಮೆ ಬಿಡುಗಡೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ ನೀಡಬೇಕು. ನಮ್ಮ ಸರಕಾರ ಇದ್ದಾಗ ಬಿತ್ತನೆ ಬೀಜ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಬಿಜೆಪಿ ಸರಕಾರದ ಅವಧಿಯಲ್ಲಿ ಬಿತ್ತನೆ ಬೀಜ ಹಂಚಿಕೆಯಲ್ಲಿ ಸಮಸ್ಯೆಯಾಗಿದೆ. ಸೋಯಾಬೀನ್ ಬೀಜದ ಬೆಲೆ ದುಪ್ಪಟ್ಟಾಗಿದೆ. ಸರಕಾರ ಕಂಪನಿಗಳು, ದಲ್ಲಾಳಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ' ಎಂದು ಅವರು ದೂರಿದರು.

ವಿಜಯೇಂದ್ರ ಹಸ್ತಕ್ಷೇಪ: ನೀರಾವರಿ ಇಲಾಖೆಯಲ್ಲಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪ ವಿಚಾರವಾಗಿ ಮಾತನಾಡಿದ ಅವರು, 'ಸರಕಾರದ ಎಲ್ಲ ಇಲಾಖೆಯಲ್ಲಿ ಹಾಡಹಗಲೇ ದರೋಡೆ ನಡೀತಿದೆ. ಈ ವಿಚಾರವಾಗಿ ಕಾನೂನು ರೀತಿಯ ತನಿಖೆ ಆಗಬೇಕು. ಮಂತ್ರಿಗಳೇ ಆಗಿರಲಿ ಯಾರೇ ಆಗಿರಲಿ ತನಿಖೆ ನಡೆಯಬೇಕು' ಎಂದರು.

`ಅಧಿಕಾರ ದಾಹಕ್ಕಾಗಿ ಸರಕಾರದಲ್ಲಿ ನಾಟಕ ನಡೀತಿದೆ. ಬಿಜೆಪಿ ಸರಕಾರವೇ ಇರಬಾರದು, ವಿಸರ್ಜನೆ ಮಾಡಬೇಕು. ರಾಜ್ಯದಲ್ಲೂ ಸಾಕಷ್ಟು ರಾಜಕೀಯ ಬದಲಾವಣೆ ಆಗಲಿದೆ. ಕಾಂಗ್ರೆಸ್ ಈಗಾಗಲೇ ಮಾದರಿ ಸರಕಾರವನ್ನ ನೀಡಿದೆ. ಜನ ಮತ್ತೆ ಕಾಂಗ್ರೆಸ್‍ಗೆ ಅವಕಾಶ ನೀಡಬೇಕು' ಎಂದು ಈಶ್ವರ್ ಖಂಡ್ರೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News