ಯಮುನಾ ವಿಹಾರದ ಸಂತ್ರಸ್ತ ಕುಟುಂಬವನ್ನು ಭೇಟಿಯಾದ ಎಸ್‍ಡಿಪಿಐ ನಿಯೋಗ: ಕಾನೂನು, ರಾಜಕೀಯ ನೆರವಿನ ಭರವಸೆ

Update: 2021-06-17 12:40 GMT

ಹೊಸದಿಲ್ಲಿ, ಜೂ.17: ದಿಲ್ಲಿಯ ಯಮುನಾ ವಿಹಾರ್ ನಲ್ಲಿ ಇದೇ ಜೂನ್ 11ರ ಮಧ್ಯರಾತ್ರಿ ಅತಿಕ್ರಮವಾಗಿ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳಿಂದ ಹಿಂಸಾಚಾರ, ಹಲ್ಲೆಗೆ ಒಳಗಾದ ಕುಟುಂಬವನ್ನು ಎಸ್‍ಡಿಪಿಐ ನಿಯೋಗವು ಭೇಟಿ ಮಾಡಿ ಎಲ್ಲ ರೀತಿಯ ಕಾನೂನು ಮತ್ತು ರಾಜಕೀಯ ನೆರವು ನೀಡುವ ಭರವಸೆ ನೀಡಿದೆ.

ಎರಡು ಮನೆಗಳಲ್ಲಿ ನಾಲ್ವರು ಸಹೋದರರ ಕುಟುಂಬಗಳು ವಾಸಿಸುತ್ತಿದ್ದವು. ಆದರೆ ಅದೃಷ್ಟವಶಾತ್ ಘಟನೆ ನಡೆದ ದಿನದಂದು, ಅವರ ತಾಯಿ ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಸಹೋದರಿ ಮತ್ತು ಅವರ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಒಂದೇ ಮನೆಯಲ್ಲಿ ಇದ್ದರು. ರಾತ್ರಿ 10 ಗಂಟೆಯ ನಂತರ, ಹೊರಗೆ ಮಾತಿಗೆ ಮಾತು ಬೆಳೆಯುತ್ತಿರುವುದು ಮನೆಯವರಿಗೆ ಕೇಳಿಸಿದೆ, ಈ ವೇಳೆ ಇಬ್ಬರು ಸಹೋದರರು ಮನೆಯಿಂದ ಹೊರಗೆ ಬಂದಿದ್ದಾರೆ. ಅವರ ಕಾಲನಿಯ ಭದ್ರತಾ ಸಿಬ್ಬಂದಿಯು ಯುವಕನೊಂದಿಗೆ ಜಗಳವಾಡುತ್ತಿರುವುದು ಕಂಡುಬಂತು. ಸೆಕ್ಯುರಿಟಿ ಗಾರ್ಡ್, ಕಾಲನಿಯ ಬಾಗಿಲನ್ನು ಹಾಕಿರುವುದು ಯುವಕನ ಕೋಪಕ್ಕೆ ಕಾರಣವಾಗಿತ್ತು ಎಂದು ನಿಯೋಗ ತಿಳಿಸಿದೆ.

ಆಗ ಓರ್ವ ಸಹೋದರ ಮಧ್ಯಪ್ರವೇಶಿಸಿ ಕೆಟ್ಟದಾಗಿ ಬಯ್ಯದಂತೆ ಹಾಗೂ ಭದ್ರತಾ ಸಿಬ್ಬಂದಿಗೆ ಬೆದರಿಸದಂತೆ ಯುವಕನಿಗೆ ಸೂಚಿಸಿದ್ದಾರೆ. ಸಹೋದರರು ಗಡ್ಡ ಬಿಟ್ಟಿದ್ದರಿಂದ ಅವರು ಮುಸ್ಲಿಮರು ಎಂದು ಗುರುತಿಸಿದ ಯುವಕ, ತಕ್ಕ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದಾದ ಬಳಿಕ ಇಬ್ಬರು ಸಹೋದರರು ಮನೆಯೊಳಗೆ ಹೋಗಿದ್ದಾರೆ.

ಆದರೆ ಸುಮಾರು ಮೂವತ್ತು ನಿಮಿಷಗಳ ಬಳಿಕ, 12ಕ್ಕೂ ಅಧಿಕ ಯುವಕರ ಗುಂಪೊಂದು ದೊಣ್ಣೆ, ಹಾಕಿ ಸ್ಟಿಕ್, ಕಬ್ಬಿಣದ ಸರಳುಗಳು ಮತ್ತು ಬಂದೂಕುಗಳು ಇತರ ಶಸ್ತ್ರಾಸ್ತ್ರಗಳೊಂದಿಗೆ ಬಂದು ಮನೆಯೊಳಗೆ ಅತಿಕ್ರಮ ಪ್ರವೇಶಿಸಿ, ವೃದ್ಧರು, ಮಹಿಳೆಯರು ಮತ್ತು ಹತ್ತು ಮತ್ತು ನಾಲ್ಕು ವರ್ಷ ಪ್ರಾಯದ ಮಕ್ಕಳು ಸೇರಿದಂತೆ ಅಲ್ಲಿದ್ದವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದೆ. ಪೊಲೀಸರು ಘಟನೆಗೆ ಸಂಬಂಧಿಸಿ ಭದ್ರತಾ ಸಿಬ್ಬಂದಿಯ ಪರವಾಗಿ ಎಫ್‍ಐಆರ್ ದಾಖಲಿಸಿದ್ದಾರೆ. ಬಳಿಕ ಸಂತ್ರಸ್ತರ ವಿರುದ್ಧವೂ ಪ್ರತಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ತಿಳಿಸಿದೆ.

ರಾಜಕೀಯ ಒತ್ತಡದ ಕಾರಣದಿಂದ ಘಟನೆ ನಡೆದು ವಾರ ಕಳೆದರೂ ಯಾವುದೇ ಆರೋಪಿಯನ್ನು ಬಂಧಿಸಿಲ್ಲ. ಸಂತ್ರಸ್ತ ಕುಟುಂಬದ ಸದಸ್ಯರು ಅಲ್ಲಿನ ಉನ್ನತ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ಯಮುನಾ ವಿಹಾರ್ ಪ್ರದೇಶವು ಫೆಬ್ರವರಿ 2020ರಲ್ಲಿ ಭೀಕರ ಹಿಂಸಾಚಾರ ನಡೆದ ಈಶಾನ್ಯ ದಿಲ್ಲಿಯ ಒಂದು ಭಾಗವಾಗಿದೆ. ದಿಲ್ಲಿ ಹೈಕೋರ್ಟ್‍ನ ನ್ಯಾಯಪೀಠವು ಹಿಂಸಾಚಾರದ ಆರೋಪಿಗಳನ್ನು ಬಂಧಿಸುವಂತೆ ಸ್ಪಷ್ಟ ಆದೇಶ ನೀಡಿದೆ.

ಆದರೆ ಗಲಭೆಯ ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದರೂ ಅವರನ್ನು ಇನ್ನೂ ಬಂಧಿಸಿಲ್ಲ. ಇದಲ್ಲದೆ, ಕೋಮು ಹಿಂಸಾಚಾರದ ಸಂತ್ರಸ್ತರು ಮತ್ತು ರಾಜಕೀಯ ವಿರೋಧಿಗಳನ್ನು ಬಂಧಿಸಿ ನಕಲಿ ಮತ್ತು ಸುಳ್ಳು ಆರೋಪಗಳಡಿ ಜೈಲಿನಲ್ಲಿ ಕಳೆಯುವಂತೆ ಮಾಡಲಾಗಿದೆ. ಹಿಂಸಾಚಾರ ನಡೆಸಿದವರು ಮತ್ತು ದುಷ್ಕರ್ಮಿಗಳು ಕಳೆದ ವರ್ಷ ಹಿಂಸಾಚಾರ ಸೃಷ್ಟಿಸಿದ ಅದೇ ಗುಂಪಿಗೆ ಸೇರಿದವರಾಗಿದ್ದಾರೆ. ಇವರೆಲ್ಲರೂ ಆಡಳಿತ ಪಕ್ಷಕ್ಕೆ ಸೇರಿದ ರಾಜಕಾರಣಿಗಳ ಪ್ರಚೋದನೆಯ ಮೇರೆಗೆ ಹಿಂಸಾಚಾರಕ್ಕೆ ಇಳಿದವರಾಗಿದ್ದಾರೆ ಎಂದು ಎಸ್‍ಡಿಪಿಐ ನಿಯೋಗ ಆರೋಪಿಸಿದೆ.

ಎಸ್‍ಡಿಪಿಐ ಉಪಾಧ್ಯಕ್ಷ ಶರ್ಫುದ್ದೀನ್ ಅಹ್ಮದ್, ಅಡ್ವಕೇಟ್ ನವೀದ್ ಅಝ್ಮಿ ಅಫ್ರಿದಿ, ಹಾಫಿಝ್ ಮುಹಮ್ಮದ್ ಹಾಶಿಮ್, ಮುಹಮ್ಮದ್ ಇಲ್ಯಾಸ್, ಡಾ.ಶಮೂನ್ ಮತ್ತು ಇತರರು ಈ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News