ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ: ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪ

Update: 2021-06-17 13:05 GMT

ಬೆಂಗಳೂರು, ಜೂ. 17: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸುತ್ತ ಬಿರುಸಿನ ರಾಜಕೀಯ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೆ `ನನ್ನ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ' ಎಂದು ಗಂಭೀರ ಆರೋಪ ಮಾಡಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರು, `ಸ್ಪೀಕರ್ ಹಾಗೂ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದೇನೆ' ಎಂದು ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳ ನಡೆಯುತ್ತಿವೆ. ಈ ಮಧ್ಯೆ ನನಗೆ ಸಾಕಷ್ಟು ಕರೆಗಳು ಬಂದಿವೆ. ಆದರೆ, ಕೆಲ ದಿನದ ಹಿಂದೆ ಒಬ್ಬರು ಕರೆ ಮಾಡಿ ನಾನು ಸ್ವಾಮಿ ಎಂದರು, ಯಾವ ಸ್ವಾಮೀಜಿ ಎಂದರೆ ಯುವ ರಾಜಸ್ವಾಮಿ ಎಂದರು. ಬೇರೆ ನಂಬರ್ ನಿಂದ ಮತ್ತೆ ಕರೆ ಮಾಡಿದರು' ಎಂದು ವಿವರಣೆ ನೀಡಿದರು.

`ನಾನು ಯುವರಾಜ ಸ್ವಾಮಿ. ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ ಎಂದರು. ಈ ಕರೆಯ ಹಿಂದೆ ಷಡ್ಯಂತ್ರ ಅಡಗಿದೆ. ನಮ್ಮ ತಂದೆ ಚಂದ್ರಕಾಂತ್ ಬೆಲ್ಲದ್ 5 ಬಾರಿ ಶಾಸಕರಾಗಿದ್ದರು. ಯಾವುದೇ ಕಪ್ಪುಚುಕ್ಕೆ ಇಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ನಾನು ಅದೇ ಮಾರ್ಗದಲ್ಲಿ ಹೋಗುತ್ತಿದ್ದೇನೆ. ಆದರೆ, ನನ್ನನ್ನು ಅಗತ್ಯವಾಗಿ ಸಿಲುಕಿರುವ ಪ್ರಯತ್ನ ನಡೆಸಲಾಗುತ್ತಿದೆ' ಎಂದು ಅರವಿಂದ ಬೆಲ್ಲದ್ ದೂರಿದರು.

`ಕಾರಾಗೃಹದಲ್ಲಿರುವ ವ್ಯಕ್ತಿಗೆ ಫೋನ್ ಕೊಟ್ಟವರು ಯಾರು? ಈ ಬಗ್ಗೆ ತನಿಖೆ ಆಗಬೇಕು. ಎಲ್ಲೇ ಹೋದರು ಒಂದಷ್ಟು ಜನ ಬರುತ್ತಾರೆ. ಅದು ಹೇಗೆ? ಎಲ್ಲಿ ಹೋಗ್ತೇನೆ, ಏನು ಮಾಡ್ತೀನಿ ಎಂದು ಗಮನಿಸುತ್ತಿದ್ದಾರೆ. ತಿಂಗಳಿಂದ ಹೀಗೆ ಮಾಡಲಾಗುತ್ತಿದೆ. ಅಲ್ಲದೆ, ನನ್ನ ಟೆಲಿಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ರಾಜ್ಯ ಸರಕಾರದ ವಿರುದ್ದ ನಾನು ಮಾತನಾಡುತ್ತಿಲ್ಲ. ತಾಂತ್ರಿಕತೆ ಬೆಳೆದಿದೆ. ಯಾರು ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಹೀಗಾಗಿ ಸ್ಪೀಕರ್, ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡುತ್ತಿದ್ದೇನೆ. ಕೂಡಲೇ ತಪ್ಪಿತಸ್ಥರನ್ನು ಪತ್ತೆ ಮಾಡಬೇಕು' ಎಂದು ಬೆಲ್ಲದ್ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News